ಬೆಳಗಾವಿ ಟಿಕೆಟ್ ಘೋಷಣೆ: ಜಗದೀಶ್ ಶೆಟ್ಟರ್ ಮೊದಲ ಪ್ರತಿಕ್ರಿಯೆ
ಹುಬ್ಬಳ್ಳಿ, ಮಾರ್ಚ್ 24: ಎರಡು ಕ್ಷೇತ್ರಗಳ ಟಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಟಿಕೆಟ್ ಪಡೆಯುವಲ್ಲಿ ಶತಾಯಗತಾಯ ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಸ್ಥಳೀಯ ನಾಯಕರ ಅಪಸ್ವರದ ನಡುವೆಯು ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಆಪ್ತರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಶೆಟ್ಟರ್ ಅವರ ಮೊದಲ ಪ್ರತಿಕ್ರಿಯೆ ಇಲ್ಲಿದೆ.
ಬಿಜೆಪಿಯಿಂದ ಟಿಕೆಟ್ ಘೋಷಣೆ ಬಳಿಕ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ವಾತಾವರಣವನ್ನು ಅರಿತಿದ್ದೇನೆ. ಎಲ್ಲವನ್ನೂ ಶಮನ ಮಾಡಿಕೊಂಡು ಮುನ್ನಡೆಯುತ್ತೇನೆ.

ನನಗೆ ಲೋಕಸಭಾ ಚುನಾವಣೆ ಹೊಸದಿರಬಹುದು. ಆದರೆ ಅಪಾರ ರಾಜಕೀಯ ಅನುಭವ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೆಳಗಾವಿ ಅಭಿವೃದ್ಧಿ ಮಾಡಬೇಕಿದೆ ಎಂದು ಅವರು ಹೇಳಿದರು.
ಬಿಎಸ್‌ವೈ, ಬಿವಿವೈಗೆ ಆಭಾರಿ: ಶೆಟ್ಟರ್
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠರಾದ ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಬೆಳಗಾವಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬೆಳಗಾವಿಯ ಎಲ್ಲ ನಾಯಕರಿಗೆ ಆಭಾರಿಯಾಗಿದ್ದೇನೆ ಎಂದರು.
ಮಾಜಿ ಸಚಿವ ದಿ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಬೆಳಗಾವಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಣದ ಮೇಲೆ ಚುನಾವಣಾ ನಡೆಯುವುದಿಲ್ಲ.
ಇದು ರಾಷ್ಟ್ರೀಯ ಚುನಾವಣೆ. ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದ್ದು, ಯಾವುದೇ ಪದವಿಗೆ ಅಥವಾ ಸಚಿವ ಸ್ಥಾನಕ್ಕೆ ಆಸೆ ಪಡುವುದಿಲ್ಲ. ತಾನಾಗಿಯೇ ಒಲಿದು ಬರಬೇಕು ಎಂದು ಅವರು ತಿಳಿಸಿದರು.

ಬೆಳೆಗಾವಿ ಸ್ಪರ್ಧೆಗೆ ವಿರೋಧ
ಮೊದಲು ಹಾವೇರಿ ಇಲ್ಲವೇ ಧಾರವಾಡ ಕ್ಷೇತ್ರ ಟಿಕೆಟ್ ನೀಡಬೇಕು, ತಾವು ಆಕಾಂಕ್ಷಿಗಳೆಂದು ಜಗದೀಶ್ ಶೆಟ್ಟರ್ ಹೇಳಿಕೊಂಡಿದ್ದರು. ಅವೆರಡು ಬೇರೆಯವರ ಪಾಲಾದ ಬಳಿಕ ಅವರ ಚಿತ್ತ ಬೆಳಗಾವಿ ಟಿಕೆಟ್ ಮೇಲೆ ನೆಟ್ಟಿತ್ತು. ಅದನ್ನು ಇನ್ನೇನು ಪಡೆದುಕೊಂಡರು ಎನ್ನುವಷ್ಟರದಲ್ಲಿ ಸ್ಥಳೀಯ ಬಿಜೆಪಿ ಕೆಲ ನಾಯಕರು ಅಪಸ್ವರ ತೆಗೆದರು.
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರ ಸ್ಪರ್ಧೆ ವಿರೋಧಿಸಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಈರಣ್ಣ ಕಡಾಡಿಯವರು ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಶೆಟ್ಟರ್ ಅವರಿಗೆ ಟಿಕೆಟ್ ನೀಡದಂತೆ ವರಿಷ್ಠರಲ್ಲಿ ಮನವಿ ಮಾಡಲು ನಿರ್ಧರಿಸಿದರು. ಗೋಬ್ಯಾಕ್ ಅಭಿಯಾನ ಆರಂಭಿಸಿದ್ದರು.
ಹಾಲಿ ಸಂಸದೆಗೆ ಕೈ ತಪ್ಪಿದ ಟಿಕೆಟ್
ಇದೆಲ್ಲ ಬೆಳವಣಿಗೆ ನಡೆದು, ಹಲವು ಕಸರತ್ತಿನ ಬಳಿಕ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಟಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಬಾರಿಯು ಬೆಳಗಾವಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಮಂಗಳಾ ಸುರೇಶ್ ಅಂಗಡಿಯವರಿಗೆ ಟಿಕೆಟ್ ಕೈತಪ್ಪಿದೆ. ಕ್ಷೇತ್ರದಲ್ಲಿ ಆದಷ್ಟು ಶೀಘ್ರವೇ ಶೆಟ್ಟರ್ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ದೆಹಲಿಯಿಂದಲೇ ಹಾಲಿ ಸಂಸದೆ ಮಂಗಳಾ ಅಂಗಡಿಯವರಿಗೆ ದೂರುವಾಣಿ ಕರೆ ಬಂದಿದೆ. ತಾವು ಜಗದೀಶ್ ಶೆಟ್ಟರ್, ಪಕ್ಷದ ಪರ ಕೆಲಸ ಮಾಡಬೇಕು. ಪಕ್ಷ ಗೆಲ್ಲಲು ಸಂಘಟಿತರಾಗಿ ಚುನಾವಣೆ ಎದುರಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಮಂಗಳಾ ಅಂಗಡಿಯವರು ತಿಳಿಸಿದ್ದಾರೆ.












Click it and Unblock the Notifications