'ರಾಜ್ಯದಲ್ಲಿ ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ ಆರಂಭ'
ಹುಬ್ಬಳ್ಳಿ, ಅಕ್ಟೋಬರ್ 30: ರಾಜ್ಯದಲ್ಲಿ ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ ಆರಂಭ ಆಗಿದ್ದು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ರೈತರಿಗೆ ವಕ್ಫ್ ಮಂಡಳಿ ನೀಡಿರುವ ನೋಟಿಸ್ ವಿಚಾರವಾಗಿ ಬಿಜಾಪುರದಲ್ಲಿ ಹೋರಾಟ ನಡೆಸಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ನೆನ್ನೆ ವಿಜಯಪುರದಲ್ಲಿ ಪ್ರವಾಸ ಮಾಡಿದ್ದೇವೆ. ಅಲ್ಲಿ ನಡೆದ ಬಗ್ಗೆ ಎಲ್ಲವನ್ನೂ ಅಧ್ಯಯನ ಮಾಡಿದ್ದೇವೆ. ರೈತರಿಗೆ ಸಂವಾದ ಹಾಗೂ ಅಧಿಕಾರಿಗಳ ಜೊತೆ ಸಭೆಯನ್ನು ಮಾಡಿದ್ದೇವೆ. ಇದೆಲ್ಲವನ್ನೂ ನೋಡಿದಾಗ ಬಹಳ ಗಂಡಾಂತರದ ವಿಷಯ ಅಂತ ತಿಳಿದು ಬಂದಿದೆ ಎಂದರು.

ಸುಮಾರು 45 ರಿಂದ 46 ಜನರಿಗೆ ನೋಟಿಸ್ ನೀಡಲಾಗಿದೆ. ನಾವು ಅಲ್ಲಿ ಹೋದ ನಂತರ ರಾಜ್ಯ ಸರ್ಕಾರದಿಂದ ಎಲ್ಲಾ ನೋಟಿಸ್ ಅನ್ನು ಹಿಂಪಡೆಯಲು ನಿರ್ಧಾರ ಮಾಡಲಾಗಿದೆ. ನೋಟಿಸ್ ಕೊಟ್ಟು ಮತ್ತೆ ಹಿಂಪಡೆಯುತ್ತಾರೆ ಅಂದರೆ ಬಹು ದೊಡ್ಡ ಗೋಟಾಲಾ ನಡೆದಿದೆ ಅಂತಾ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಪಹಣಿಯಲ್ಲಿ ಖಾತೆ 9 ಮತ್ತು 11ರಲ್ಲಿ ಹೆಸರು ಕೂರಿಸಿದ್ದಾರೆ. ಹೆಸರು ಕೂರಿಸಲು ಆರು ತಿಂಗಳು ಗಟ್ಟಲೆ ಸಮಯಾವಕಾಶ ತೆಗೆದುಕೊಳ್ಳುತ್ತದೆ ಇದನ್ನು ನೋಡಿದರೆ ಬಹಳ ಬೇಗ ಹೆಸರು ಕೂರಿಸುವ ಕೆಲಸ ಆಗಿದೆ . ಕೇಂದ್ರ ಸರ್ಕಾರ ವಕ್ಫಗೆ ಸಂಬಂಧ ಪಟ್ಟಂತೆ ಅಮೆಂಡಮೆಂಟ್ ತರುವ ವೇಳೆ ಜಮೀರ್ ಅಹ್ಮದ್ ವಿಶೇಷ ಮುತುವರ್ಜಿ ವಹಿಸಿದ್ದಾರೆ.
ನಡಾವಳಿಯಲ್ಲಿ ಮುಖ್ಯಮಂತ್ರಿ ಮೌಕಿಕ ಆದೇಶದ ಮೇರೆಗೆ 15 ದಿನಗಳ ಒಳಗೆ ಎಲ್ಲಾ ಹೆಸರನ್ನು ಕೂರಿಸಬೇಕು ಎಂದು ಅಧಿಕಾರಿಗಳ ಮೇಲೆ ಒತ್ತಡ ತರಲಾಗಿದ್ದು, ಸಚಿವ ಜಮೀರ್ ಅಹ್ಮದ್ ಅವರು ನೇರವಾಗಿ ಈ ವಿಷಯದಲ್ಲಿ ಭಾಗಿಯಾಗಿದ್ದಾರೆ ಅಂತಾ ನಿನ್ನೆ ಗೊತ್ತಾಗಿದೆ. ಅನೇಕ ಭೂಮಿಗಳನ್ನು ಕಬಳಿಸುವ ಕೆಲಸ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಧಾರವಾಡ, ಗದಗ, ಯಾದಗಿರಿ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಈ ರೀತಿಯಾಗಿದ್ದು, ಇದೆಲ್ಲದಕ್ಕೂ ನೇರವಾಗಿ ಕಾಂಗ್ರೆಸ್ ಪಕ್ಷ ಭಾಗಿಯಾಗಿದೆ.
ರಾಜ್ಯದಲ್ಲಿ ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ ಆರಂಭ ಆಗಿದೆ. ಲ್ಯಾಂಡ್ ಹೊಡೆದು ಅಲ್ಪಸಂಖ್ಯಾತರಿಗೆ ಕೊಟ್ಟು ದುರ್ಬಳಕೆ ಮಾಡುವ ವಿಚಾರ ನಡೆದಿದೆ. ಈ ಎಲ್ಲಾ ದಾಖಲೆಗಳು ತಂದಿದ್ದೇನೆ ಅದನ್ನು ಕೊಡುತ್ತೇನೆ. ಸರ್ಕಾರಿ ದಾಖಲೆಗಳಲ್ಲಿ ಬಂದಿರುವಂತಹ ಸಂಗತಿ ಇದು ನಡವಳಿಯಲ್ಲಿ ಏನಾಗಿದೆ ಅಂತ ನಾನು ಬಹಿರಂಗಪಡಿಸಿ ತೋರಿಸ್ತೇನೆ ಎಂದು ಹೇಳಿದರು.












Click it and Unblock the Notifications