ಹುಬ್ಬಳ್ಳಿ; ಮೇ 1ರಿಂದ ಮಂಗಳೂರು, ಮೈಸೂರಿಗೆ ವಿಮಾನ
ಹುಬ್ಬಳ್ಳಿ, ಏಪ್ರಿಲ್ 10; ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ವಿಮಾನ ಸೇವೆ ಆರಂಭವಾಗುತ್ತಿದೆ.
ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಂಗಳೂರು, ಮೈಸೂರಿಗೆ ಸಂಪರ್ಕ ಕಲ್ಪಿಸಲು ವಿಮಾನ ಸೇವೆ ಆರಂಭಿಸುವಂತೆ ಇಂಡಿಗೂ ಸಂಸ್ಥೆಗೆ ಮನವಿ ಮಾಡಿದ್ದರು. ಸಂಸ್ಥೆ ಇದಕ್ಕೆ ಒಪ್ಪಿಗೆ ನೀಡಿದೆ.
ಮೇ 1ರಿಂದ ವಾರದಲ್ಲಿ 4 ದಿನ ಮಂಗಳೂರಿಗೆ ಮತ್ತು ಮೇ 3ರಿಂದ ವಾರದಲ್ಲಿ ಮೂರು ದಿನ ಮೈಸೂರಿಗೆ ಹುಬ್ಬಳ್ಳಿಯಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್ ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.

ವಿಮಾನ ಹಾರಾಟಕ್ಕೆ ಒಪ್ಪಿಗೆಕೊಟ್ಟ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಇಂಡಿಗೋ ಸಂಸ್ಥೆ ಆಡಳಿತ ವರ್ಗಕ್ಕೆ ಪ್ರಹ್ಲಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.
ವಿಮಾನ ಹಾರಾಟ ಕಡಿಮೆ; ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಮಾನಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಗೆ ವಿಮಾನ ಹಾರಾಟ ಕಡಿಮೆ ಮಾಡಿವೆ, ಪ್ರತಿದಿನ ಸಂಚಾರ ನಡೆಸುವ ಹಲವು ವಿಮಾನಗಳನ್ನು ಕಡಿತಗೊಳಿಸಿವೆ.
ಕೋವಿಡ್ ಪರಿಸ್ಥಿತಿಗೂ ಮೊದಲು ಬೆಂಗಳೂರು, ಮಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ ರಾಜ್ಯದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣವಾಗಿತ್ತು. ಕೋವಿಡ್ ಬಳಿಕ ನಿಧಾನವಾಗಿ ವಿಮಾನಗಳ ಹಾರಾಟ ಕಡಿಮೆಯಾಗುತ್ತಾ ಬಂದಿತು.
ಕೋವಿಡ್ 3ನೇ ಅಲೆಗೂ ಮೊದಲು ಹುಬ್ಬಳ್ಳಿಯಿಂದ ಮುಂಬೈ, ಚೆನ್ನೈ, ಕಣ್ಣೂರು, ಕೊಚ್ಚಿ, ಹಿಂಡನ್, ತಿರುಪತಿಗೆ ಪ್ರತಿದಿನದ ವಿಮಾನಗಳಿದ್ದವು. ಬೆಂಗಳೂರಿಗೆ 2 ರಿಂದ 3 ವಿಮಾನ ಹಾರಾಟ ನಡೆಸುತ್ತಿತ್ತು.
ಪ್ರಸ್ತುತ ವಾರದಲ್ಲಿ 4 ದಿನ ಮಾತ್ರ ಮುಂಬೈ, ಚೆನ್ನೈ, ಕಣ್ಣೂರು, ಹಿಂಡನ್‌ಗೆ ವಿಮಾನ ಸೇವೆ ಇದೆ. ಕೊಚ್ಚಿಗೆ ಯಾವುದೇ ವಿಮಾನವಿಲ್ಲ. ತಿರುಪತಿಗೆ ವಾರದಲ್ಲಿ 2 ದಿನ ಮಾತ್ರ ವಿಮಾನ ಹುಬ್ಬಳ್ಳಿಯಿಂದ ಇದೆ.
ಹುಬ್ಬಳ್ಳಿಯಿಂದ ಇಂಡಿಗೋ ಅತಿ ಹೆಚ್ಚಿನ ವಿಮಾನವನ್ನು ಹಾರಾಟ ಮಾಡುತ್ತಿತ್ತು. ಆದರೆ ಈಗ ಪ್ರಮುಖ ಸ್ಥಳಗಳಿಗೆ ಪ್ರತಿದಿನದ ವಿಮಾನ ಹಾರಾಟ ನಡೆಸಲು ಇಂಡಿಗೋ ಆಸಕ್ತಿ ತೋರಿಸುತ್ತಿಲ್ಲ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡ ಮಾರ್ಗಗಳ ವಿಮಾನಗಳನ್ನು ಈ ವರ್ಷದಲ್ಲಿ ಆರಂಭಿಸಲು ವಿಮಾನಯಾನ ಸಂಸ್ಥೆಗಳು ಸಿದ್ಧವಿಲ್ಲ. ಮುಂಬರುವ ಹಣಕಾಸು ವರ್ಷದಿಂದ ಕೆಲವು ಮಾರ್ಗಗಳ ಸೇವೆ ಆರಂಭಿಸುವ ನಿರೀಕ್ಷೆ ಇದೆ.
ಏರ್ ಇಂಡಿಯಾ ಹೊಸ ನಿರ್ವಹಣೆಯ ಅಡಿಯಲ್ಲಿ ಹುಬ್ಬಳ್ಳಿಯಿಂದ ಕೆಲವು ವಿಮಾನಗಳನ್ನು ಹಾರಾಟ ನಡೆಸಬಹುದು ಎಂದು ಅಂದಾಜಿಸಲಾಗಿದೆ. ನಗರದ ಅನೇಕ ವಿಮಾನ ಪ್ರಯಾಣಿಕರು ಮತ್ತು ಉದ್ಯಮಿಗಳು ಬೆಂಗಳೂರಿಗೆ ಸಂಜೆಯ ವಿಮಾನ ಪುನರಾರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.
ಹುಬ್ಬಳ್ಳಿಯಿಂದ ಪ್ರಸ್ತುತ ಮುಂಬೈ, ಚೆನ್ನೈ, ಹಿಂಡನ್ ಮತ್ತು ಕಣ್ಣೂರಿಗೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ವಿಮಾನಗಳಿವೆ. ತಿರುಪತಿಗೆ ಶುಕ್ರವಾರ ಮತ್ತು ಭಾನುವಾರ ವಿಮಾನಗಳಿವೆ.











Click it and Unblock the Notifications