ಗಂಧದ ಗುಡಿ ಸಂಭ್ರಮದಲ್ಲೂ ಸಾಮಾಜಿಕ ಕಳಕಳಿ ಮೆರೆದ ಅಪ್ಪು ಅಭಿಮಾನಿಗಳು
ಹುಬ್ಬಳ್ಳಿ, ಅಕ್ಟೋಬರ್ 28: ಚಂದನವನದ ಪವರ್ ಸ್ಟಾರ್ ಅಚ್ಚುಮೆಚ್ಚಿನ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಪ್ರಕೃತಿ ಸೌಂದರ್ಯ ಸಾರುವ ಗಂಧದಗುಡಿ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅಪ್ಪು ನೆನಪಿನಲ್ಲಿ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಚ್ಚಿನ ಪರಮಾತ್ಮನಂತೆ ಅವರ ಅಭಿಮಾನಿಗಳು ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಾ ಯುವರತ್ನ ಇನ್ನೂ ನಮ್ಮೊಂದಿಗೆ ಇದ್ದಾರೆ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ.
ಇಂದು ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿಯ ಕಂಪು ಎಲ್ಲೆಡೆ ಸೂಸುತ್ತಿದೆ. ಹುಬ್ಬಳ್ಳಿಯಲ್ಲೂ ಅದ್ದೂರಿಯಾಗಿ ಚಿತ್ರ ತೆರೆಕಂಡಿದ್ದು, ಅಪ್ಪು ಅಭಿಮಾನಿಗಳು ಸಂಭ್ರಮದೊಂದಿಗೆ ಮಾದರಿ ಕೆಲಸದಿಂದ ಅದ್ಧೂರಿಯಾಗಿ ಗಂಧದ ಗುಡಿಯನ್ನು ಸ್ವಾಗತಿಸಿಕೊಂಡಿದ್ದಾರೆ.
ಶ್ರವಣ ದೋಷ ಇರುವವರಿಗೆ ಉಚಿತವಾಗಿ ಮಶೀನ್ ಹಂಚುವ ಮೂಲಕ ಅಪ್ಪು ಅಭಿಮಾನಿಗಳು ಮಾದರಿಯಾಗಿದ್ದಾರೆ. ಸುಮಾರು ಐವತ್ತು ಮಂದಿ ಶ್ರವಣ ದೋಷ ಇರುವವರಿಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಉಚಿತವಾಗಿ ಮಶೀನ್ ಹಂಚಿದರು. ಹುಬ್ಬಳ್ಳಿ ತಾಲೂಕಿನ ವಿವಿಧ ಹಳ್ಳಿಗಳ ಬಡವರಿಗೆ ಅಪ್ಪು ಅಭಿಮಾನಿಗಳು ಮಶೀನ್ ವಿತರಣೆ ಮಾಡಿ ಅವರ ಬಾಳು ಬೆಳಗುವಂತೆ ಮಾಡಿದರು.

ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ರಘು ಹಾಗೂ ಸ್ನೇಹಿತರಿಂದ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಮಶೀನ್‌ಗಳನ್ನು ವಿತರಣೆ ಮಾಡಲಾಯಿತು. ಬಳಿಕ ಮಾತನಾಡಿದ ಅಭಿಮಾನಿಗಳು " ಅಪ್ಪು ನಮಗೆ ಹೀರೋ ಅಲ್ಲ.. ದೇವರು.. ಅವರ ಹೆಸರಿನಲ್ಲಿ ನಮ್ಮ ಕೈಲಾದಷ್ಟು ಸೇವೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯ ಅಪ್ಪು ಅಭಿಮಾನಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications