ಹುಬ್ಬಳ್ಳಿ : ಮಗನನ್ನು ಕೊಂದು ತಂದೆ ಆತ್ಮಹತ್ಯೆ
ಹುಬ್ಬಳ್ಳಿ, ಡಿಸೆಂಬರ್ 21 : ಮಗನನ್ನು ಕೊಂದು ತಂದೆಯೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನಗರದ ಸಿದ್ದರಾಮೇಶ್ವರ ಕಾಲೋನಿ ನಿವಾಸಿ ಶಂಕರ್ ಕರವೆ (34) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ಇವರು ಪುತ್ರ ರಮಾನಂದ ಕರವೆ (11)ಯನ್ನು ಹತ್ಯೆ ಮಾಡಿದ್ದಾರೆ.

ತಂದೆಯ ಆತ್ಮಹತ್ಯೆ, ಮಗನ ಕೊಲೆಗೆ ಸಾಲ ಬಾಧೆ ಕಾರಣ ಎಂದು ತಿಳಿದುಬಂದಿದೆ. ಶಂಕರ್ ಕರವೆ ಅವರಿಗೆ ಎರಡು ಮದುವೆ ಆಗಿತ್ತು. ಮೊದಲನೇ ಹೆಂಡತಿ ತೀರಿ ಹೋದ ಬಳಿಕ ಮತ್ತೊಂದು ಮದುವೆ ಆಗಿದ್ದರು.
ಹತ್ಯೆಯಾಗಿರುವ ರಮಾನಂದ ಕರವೆ ಮೊದಲ ಹೆಂಡತಿಯ ಮಗ. ಎರಡನೇ ಮದುವೆ ಬಳಿಕ ಹೆಚ್ಚಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪದೇ-ಪದೇ ಮನೆಗೆ ಬಂದು ಕಿರುಕುಳ ನೀಡುತಿದ್ದರು. ಆದ್ದರಿಂದ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications