ಹುಬ್ಬಳ್ಳಿಯಲ್ಲಿ ಸೆರೆಸಿಕ್ಕ ಬೃಹತ್ ಹನಿಟ್ರ್ಯಾಪ್ ಗ್ಯಾಂಗ್: ಬಂಧಿತರ ಪ್ಲಾನ್‌ಗಳೇ ರೋಚಕ...
ಹುಬ್ಬಳ್ಳಿ, ಅಕ್ಟೋಬರ್ 09: ವಾಣಿಜ್ಯ ನಗರಿ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಸೇರಿದಂತೆ ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ವೊಂದನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಗಳಿಸುತ್ತಿದ್ದ ಗ್ಯಾಂಗ್ ಇಂದು ಖಾಕಿ ಖೆಡ್ಡಾಗೆ ಬಿದ್ದಿದ್ದೆ ರೋಚಕವಾಗಿದೆ.
ಛೋಟಾ ಮುಂಬೈ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯು ಇತ್ತೀಚೆಗೆ ಅಪರಾಧ ಚಟುವಟಿಕೆಗಳಿಂದ ಮುನ್ನಲೆಗೆ ಬರುತ್ತಿರುವುದು ದುರದೃಷ್ಟಕರವಾಗಿದೆ. ಬಂಧಿತರ ಗ್ಯಾಂಗ್‌ನಲ್ಲಿ ಒಟ್ಟು 5 ಮಂದಿ ಸಕ್ರಿಯವಾಗಿದ್ದರು. ಸದ್ಯ ಪೊಲೀಸರ ಅತಿಥಿಗಳಾಗಿರುವ ಇವರು, ಹಣ ಪೀಕಲು ವ್ಯಾಪಾರಸ್ಥರು, ಶ್ರೀಮಂತರನ್ನು ಪತ್ತೆ ಮಾಡಿ ಹೊಂಚು ಹಾಕಿ ಪ್ಲಾನ್ ಸಕ್ಸಸ್ ಮಾಡುತ್ತಿದ್ದರು.

ಈ ಗ್ಯಾಂಗ್ ವಿರುದ್ಧ ದೂರು ಸಲ್ಲಿಕೆಯಾಗಿತ್ತು. ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ತಂಡವು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 5 ಮೊಬೈಲ್, 2 ಬೈಕ್, 9000 ನಗದು ಸೇರಿದಂತೆ 93,000 ಮೌಲ್ಯದ ವಸ್ತುಗಳ ವಶಕ್ಕೆ ಪಡೆಯಲಾಗಿದೆ ಎಂದು ಇಲ್ಲಿನ ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಮಲ್ಲಿಕಾರ್ಜುನ ನಂದಗಾವಿ ಮಾಹಿತಿ ನೀಡಿದ್ದಾರೆ.
ಗ್ಯಾಂಗ್ ಕೃತ್ಯಗಳ ಪಿನ್‌ಟು ಪಿನ್ ಮಾಹಿತಿ
ಈ ಕುರಿತು ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡದ ಮಲ್ಲಿಕಾರ್ಜುನ ನಂದಗಾವಿ ಅವರು, ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಹನಿಟ್ರ್ಯಾಪ್ ನಲ್ಲಿ ಗ್ಯಾಂಗ್‌ವೊಂದು ಸಕ್ರಿಯವಾಗಿತ್ತು. ಈ ಗ್ಯಾಂಗ್ ಸದಸ್ಯರು ವ್ಯಾಪಾರಸ್ಥರನ್ನು, ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿತ್ತು. ಅವರನ್ನು ಬಲೆಗೆ ಬೀಳಿಸಿಕೊಂಡು ನಂತರ ಬ್ಲಾಕ್ ಮೇಲೆ ಮಾಡಿ ಹಣ ಪೀಕುತ್ತಿತ್ತು.
ಅಂಗಡಿ ಹೊರಗಿನ ಮೊಬೈಲ್ ಸಂಖ್ಯೆ ಸಂಗ್ರಹ
ಮೊದಲು ಗ್ಯಾಂಗ್‌ನ ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್ ವ್ಯಾಪಾರಸ್ಥರು ಅಂಗಡಿ ಹೊರಗೆ ನಾಮಫಲಕ, ಬೋರ್ಡ್‌ಗಳಲ್ಲಿ ಹಾಕಿರುವ ನಂಬರ್ ಗಳನ್ನು ಸಂಗ್ರಹಿಸುತ್ತಿದ್ದರು. ಈ ಮೊಬೈಲ್ ನಂಬರ್‌ಗಳನ್ನು ಜೋಯಾ ಹಾಗು ಪರವಿನ್ ಗೆ ನೀಡುತ್ತಿದ್ದರು.

ಈ ಮಹಿಳೆಯರಿಬ್ಬರು ಆ ವ್ಯಾಪಾರಿಗಳ ನಂಬರ್‌ಗೆ ಸಂದೇಶ ಮಾಡುತ್ತಿದ್ದರು. ಕೆಲವೊಮ್ಮೆ ಗ್ರಾಹಕರ ಸೋಗಿನಲ್ಲಿ ಕರೆ ಮಾಡಿ ವಿಚಾರಿಸುತ್ತಿದ್ದರು. ಹೀಗೆ ಕೆಲವೇ ದಿನಗಳಲ್ಲಿ ತಮ್ಮ ಬಲೆಗೆ ಬೀಳಿಸಿಕೊಂಡು ಅವರೊಂದಿಗೆ ವಿಡಿಯೋ ಮಾಡಿಕೊಳ್ಳುತ್ತಿದ್ದರು. ನಂತರ ಅವುಗಳನ್ನೇ ಇಟ್ಟುಕೊಂಡು ಹಣ ಗಳಿಸುತ್ತಿದ್ದರು.
ಹನಿಟ್ರ್ಯಾಪ್ ಬಲೆಗೆ ಬಿದ್ದ ಶ್ರೀಮಂತರು, ವ್ಯಾಪಾರಿಗಳಿಗೆ ಗೊತ್ತಾಗದಂತೆ ಗುಟ್ಟಾಗಿ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ವಿಡಿಯೋ ತುಣಕುಗಳನ್ನು ಇಟ್ಟುಕೊಂಡು ಹೆದರಿಸುತ್ತಿದ್ದರು. ಮೊದಲು ಎರಡು ಮೂರು ನಿಮಿಷಗಳ ವಿಡಿಯೋವನ್ನು ಸಂತ್ರಸ್ತರಿಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದರು.
ನೀವು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋಗಳನ್ನು ನಿಮಗೆ ಸಂಬಂಧಿಸಿದವರಿಗೆ, ಇಲ್ಲವೇ ಆನ್‌ಲೈನ್ ನಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದರು. ಮರಿಯಾದೆ ಗೌರವಕ್ಕೆ ಆರೋಪಿಗಳು ಕೇಳಿದಷ್ಟು ಹಣ ನೀಡಲು ಇವರು ಸಿದ್ಧವಾಗುತ್ತಿದ್ದರು. ಹೀಗೆ ಅನೇಕ ಬಾರಿ ಇಂತಹ ಕೃತ್ಯಗಳನ್ನು ಮಾಡಿದ್ದಾರೆ. ಹಲವಾರು ಜನರಿಗೆ ಈ ಗ್ಯಾಂಗ್ ಬೆದರಿಸಿ, ಬ್ಲಾಕ್ ಮೇಲೆ ಹಣ ಕಿತ್ತಿದೆ.
ಐದು ಲಕ್ಷ ಹಣಕ್ಕೆ ಬೇಡಿಕೆ, ದೂರು ದಾಖಲು
ಇತ್ತೀಚೆಗೆ ಇದೇ ಗ್ಯಾಂಗ್ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದೆ ಎಂದು ಚಗನ್ ಲಾಲ್ ಎಂಬುವವರು ಸಿಸಿಬಿ ಪೊಲೀಸರಿಗೆ ದೂರು ನೀಡದ್ದರು. ಅವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಗ್ಯಾಂಗ್‌ನ ಎಲ್ಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಬಂಧಿತರು ಹುಬ್ಬಳ್ಳಿ ನಿವಾಸಿಗಳೇ ಎನ್ನಲಾಗಿತದೆ. ಮುಲ್ಲಾ ಓಣನಿವಾಸಿ ಜೋಯಾ ಶಬಾನಾ, ತೊರವಿ ಹಕ್ಕಲದ ಪರವಿನ್ ಭಾನು, ಡಾಕಪ್ಪ ಸರ್ಕಲ್ ನಿವಾಸಿ ಸಯೀದ್ ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್ ಮತ್ತು ಅಬ್ದುಲ್ ರೆಹಮಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಈಗಾಗಲೇ ಗದಗ ,ಕೊಪ್ಪಳ, ಹೊಸಪೇಟೆ ಮುಂತಾದ ಕಡೆಗಳಲ್ಲಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications