ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳಿಂದ ಅಕ್ರಮ ಬಡ್ಡಿ ವ್ಯವಹಾರ: ಅಪ್ರಾಪ್ತ ಸೇರಿ 25 ಮಂದಿ ಬಂಧನ
ಹುಬ್ಬಳ್ಳಿ, ಆಗಸ್ಟ್ 22: ಬಡ್ಡಿ ಸಾಲಕ್ಕೆ ಸಂಬಂಧಿಸಿದಂತೆ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಪುಡಾರಿಗಳನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಹೆಡೆಮುರಿಕಟ್ಟಿದ್ದು, ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ 25 ದಂಧೆಕೋರರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗಾರೊಂದಿಗೆ ಮಾತನಾಡಿದ್ದು, ಆಗಸ್ಟ್ 18ರಂದು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿ ಹಲ್ಲೆ ಮಾಡಿದ್ದರು. ಅಪ್ರಾಪ್ತ ಬಾಲಕರ ನಡುವೆ ಜಗಳ ಆಗಿತ್ತು. ಕತ್ತಿನ ಭಾಗಕ್ಕೆ ಗಾಯ ಮಾಡಲಾಗಿತ್ತು, ಬಾಲಕ ಈಗ ಸುರಕ್ಷಿತನಾಗಿದ್ದಾನೆ. ನಾವು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ವಿಚಾರಣೆ ವೇಳೆ ಕಿಡ್ನಾಪ್ ಮಾಡಿ, ವಾರದ ಬಡ್ಡಿ ಲೆಕ್ಕದ ಮೇಲೆ ಹಣಕ್ಕೆ ಬೇಡಿಕೆ ಇಟ್ಟಿರುವುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಇಬ್ಬರು ಮೇಜರ್ ಹಾಗೂ ನಾಲ್ಕು ಜನ ಮೈನರ್ ಇದ್ದರು. ಅಪ್ರಾಪ್ತ ಬಾಲ ಅಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ, ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ ಕೆಲವರು ಈ ಬಾಲಕರನ್ನು ಉಪಯೋಗಿಸಿಕೊಂಡು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ದುಪ್ಪಟ್ಟು ಬಡ್ಡಿಗೆ ಹಣ ನೀಡಿ, ವಾಹನಗಳನ್ನು ಇಟ್ಟುಕೊಳ್ಳೋದು, ಬೆದರಿಕೆ ಹಾಕುವುದು ಸೇರಿ ಹಲವು ರೀತಿಯ ಕೃತ್ಯಗಳನ್ನು ಮಾಡುತ್ತಿರುವುದು ತಿಳಿದು ಬಂದಿದೆ. ಮುಂದುವರೆದು ಸುಮಾರು 10 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಹೇಳಿದರು.
ಎಲ್ಲರೂ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವಂತವರೇ. ಇವರ ಹತ್ತಿರ ಸಾಕಷ್ಟು ದಾಖಲಾತಿ ಪಡೆದಿದ್ದೇವೆ. ಇವರಿಂದ ಬೆದರಿಕೆಗೆ ಒಳಗಾದವರಿಂದ ದೂರು ಪಡೆದಿದ್ದೇವೆ. ಧಾರವಾಡ ನಗರದಲ್ಲೂ ಇದೇ ರೀತಿ ಘಟನೆಗಳು ನಡೆದಿವೆ. ವಿದ್ಯಾಗಿರಿ, ಶಹರ, ಉಪನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ ಎಂದರು.

ಸಾರ್ವಜನಿಕರಿಗೆ ಸುಲಿಗೆ, ಬೆದರಿಕೆ ಸೇರಿ ಹಲವು ಪ್ರಕರಣಗಳಲ್ಲಿ ಗುರುತಿಸಿಕೊಂಡವರನ್ನು ಬಂಧಿಸಲಾಗಿದೆ. ಸುಮಾರು 12 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ. ಇದರಲ್ಲಿ ಇಬ್ಬರು ಮಹಿಳೆಯರು ಸಹ ಇದ್ದಾರೆ. ಧಾರವಾಡದ ವಿದ್ಯಾಗಿರಿ, ಶಹರ, ಉಪನಗರ ಹಾಗೂ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿವೆ. ಒಟ್ಟು 24 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರು ಪಡಿಸುವ ಕೆಲಸ ಮಾಡುತ್ತೇವೆ. ಹಣ ವಾಪಸ್ ಪಡೆಯಲು ಮಾರಕಾಸ್ತ್ರ ಇಟ್ಟುಕೊಂಡವರನ್ನು ವಶಕ್ಕೆ ಪಡೆದಿದ್ದೇವೆ. 10ಕ್ಕೂ ಹೆಚ್ಚು ಮೊಬೈಲ್‌ಗಳು 8 ದ್ವಿಚಕ್ರ ವಾಹನಗಳು, ಹರಿತವಾದ ಎರಡು ಆಯುಧಗಳು, ಹಲವು ದಾಖಲೆಗಳು ಸಿಕ್ಕಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸುತ್ತೇವೆ ಎಂದರು.












Click it and Unblock the Notifications