Hubballi: ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಜ.15-26ರವರೆಗೆ ಮಹಾಮಸ್ತಕಾಭಿಷೇಕ, ಉಪರಾಷ್ಟ್ರಪತಿ ಭಾಗಿ
ಹುಬ್ಬಳ್ಳಿ, ಡಿಸೆಂಬರ್ 28: ಹುಬ್ಬಳ್ಳಿಯ ತಾಲೂಕಿನ ವರೂರು ಜೈನ ತೀರ್ಥಕ್ಷೇತ್ರವಾಗಲಿದೆ. ಈಗಾಗಲೇ ಜೈನ ನವಗ್ರಹ ತೀರ್ಥವನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ವರ್ಷದಂದು ಎರಡನೇ ವಾರ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡಿಯವರ ಅಧ್ಯಕ್ಷತೆಯಲ್ಲಿ ಪಂಚಕಲ್ಯಾಣ ಪ್ರತಿಷ್ಠ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಜರುಗಲಿದೆ.
ಹುಬ್ಬಳ್ಳಿಯ ವರೂರಿನ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಜನವರಿ 15 ರಿಂದ 26ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಸಮಾರಂಭ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ' ಎಂದು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜ ಶನಿವಾರ ಮಾಹಿತಿ ನೀಡಿದರು.

ಜನವರಿ 15ರ ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲ ಥಾವರಚಂದ ಗೆಹಲೋತ್ ಪೂಜಾವಿಧಿ, ವಿಧಾನ ನೆರವೇರಿಸಿ ಚಾಲನೆ ನೀಡಲಿದ್ದಾರೆ. ಜನವರಿ 16ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಧ್ವಜಾರೋಹಣ ನೆರವೇರಿಸುವರು.
ವಿವಿಧ ರಾಜ್ಯಗಳ ರಾಜ್ಯಪಾಲರು, 450 ಸ್ವಾಮೀಜಿ ಆಗಮನ
ಒಟ್ಟು 12 ದಿನಗಳಲ್ಲಿ ನಡೆಯಲಿರುವ ಈ ಬೃಹತ್ ಸಮಾರಂಭದಲ್ಲಿ ರಾಜಸ್ಥಾನ, ಮೇಘಾಲಯ, ಪಂಜಾಬ್, ಕೇರಳದ ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯದ 20ಕ್ಕೂ ಹೆಚ್ಚು ಸಚಿವರು ಪಾಳ್ಗೊಳ್ಳುವರು. ವಿವಿಧ ರಾಜ್ಯಗಳ 450ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ' ಎಂದು ಗುಣಧರನಂದಿ ಮಹಾರಾಜ ತಿಳಿಸಿದರು.
ಕರ್ನಾಟಕ ದೇಶದ ವಿವಿಧೆಡೆಯಿಂದ ಅಲ್ಲದೇ ಅಮೆರಿಕಾ, ಜರ್ಮನಿ, ಫ್ರಾನ್ಸ್ ದೇಶಗಳಿಂದಲೂ ಪ್ರತಿನಿಧಿಗಳು ಬರಲಿದ್ದಾರೆ. ವಿವಿಧೆಡೆ 350ಕ್ಕಿಂತಲೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿದಿನ ಒಂದು ಲಕ್ಷ ಮಂದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ
ಜೈನ ಸಾಹಿತ್ಯ, ಸಂಗೀತ, ವೃಥ ಬಂಧನ, ಮುಂಜಿ ಬಂಧನ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜನವರಿ 22 ರಿಂದ 24ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಆಗಮಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ.
ಇದಷ್ಟೇ ಅಲ್ಲದೇ ಲೇಸರ್ ಶೋ ಮೂಲಕ ಮಹಾಮಸ್ತಕಾಭಿಷೇಕದ ದೃಶ್ಯ ಪ್ರದರ್ಶಿಸಲಾಗುವುದು. 405 ಅಡಿ ಎತ್ತರದ ಸುಮೇರು ಪರ್ವತ ಉದ್ಘಾಟನೆ, 3ಡಿ ಸಿನಿಮಾ ಮೂಲಕ ಅಧ್ವತ ಪಾರ್ಶ್ವನಾಥರ ಪಾತ್ರದ ದರ್ಶನ, ವಿಶ್ವಶಾಂತಿಗಾಗಿ 9999 ಹವನಕುಂಡ ಸ್ಥಾಪನೆ, ಹೆಲಿಕಾಪ್ಟರ್ ಮೂಲಕ ನವಗ್ರಹ ತೀರ್ಥಂಕರ ಮೂರ್ತಿಗಳ ಮೇಲೆ ಪುಷ್ಪವೃಷ್ಟಿ, ಅಂತಾರಾಷ್ಟ್ರೀಯ ಕವಿ ಸಮ್ಮೇಳನ, ಸರ್ವಧರ್ಮ ಸಮ್ಮೇಳನ ನಡೆಯಲಿದೆ' ಎಂದು ಅವರು ವಿವರಿಸಿದರು.
ಕಾರ್ಯಕ್ರಮಕ್ಕೆ ಸಹಕಾರ ಕೋರಿದ ವೀರೇಂದ್ರ ಹೆಗ್ಗಡೆ
ಈಗಾಗಲೇ ಸಮಾರಂಭ ಕುರಿತು ಪೂರ್ವಭಾವಿ ಸಭೆ ನಡೆದಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮಾತನಾಡಿ, 'ವರೂರು ತೀರ್ಥಕ್ಷೇತ್ರದಲ್ಲಿ ನಡೆಯುವ ಎರಡನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು. ಸಮಾಜದ ಎಲ್ಲ ವರ್ಗದವರು ಪ್ರೀತಿ, ವಿಶ್ವಾಸದಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. .












Click it and Unblock the Notifications