ಹನುಮಂತಪ್ಪನ ಸಾವಿಗೆ ವರ್ಷವಾದರೂ ಪತ್ನಿಗೆ ಕೆಲಸವಿಲ್ಲ!

Posted By:
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 10 : ಫೆಬ್ರವರಿ 11... ದೇಶವನ್ನು ಪ್ರೀತಿಸುವ ಯಾವುದೇ ವ್ಯಕ್ತಿ ಈ ದಿನವನ್ನು ಮರೆಯುವುದಿಲ್ಲ. ಅಂದು ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ನಲ್ಲಿ 35 ಅಡಿ ಹಿಮದಲ್ಲಿ ಸಿಲುಕಿ ಪವಾಡಸದೃಶವಾಗಿ ವಾಪಸ್ ಬಂದರೂ ಕೊನೆಗೆ ಹುತಾತ್ಮನಾದ ದಿನ.

ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿದ್ದ ಹನುಮಂತಪ್ಪನ ಆರೋಗ್ಯ ಸುಧಾರಿಸಲೆಂದು ಜನರು ಮಾಡಿದ ಪ್ರಾರ್ಥನೆ ಫೆಬ್ರವರಿ 11ರಂದು ಮಣ್ಣಾಯಿತು. ಇದನ್ನು ದೇಶದ ಜನತೆ ಮರೆತಿಲ್ಲ. ಆದರೆ, ಕಂಡಕಂಡವರಿಗೆಲ್ಲ ಸೈಟು, ಕೆಲಸ ಕೊಡುವ ರಾಜ್ಯ ಸರಕಾರ ಮರೆತಿದೆ.

"ನನಗೆ ಗಂಡು ಮಕ್ಕಳಿಲ್ಲ. ಇದ್ದರೆ ಅವರನ್ನೂ ಸೈನ್ಯಕ್ಕೆ ಸೇರಿಸುತ್ತಿದ್ದೆ" ಎಂದು ನೋವನ್ನೆಲ್ಲ ನುಂಗಿ ದೇಶಸೇವೆಯ ಬಗ್ಗೆ ಮಾತನಾಡಿದ್ದ ಮಹಾದೇವಿ (ಹನುಮಂತಪ್ಪನ ಹೆಂಡತಿ) ಜೀವನ ಸಾಗಿಸಲು ನನಗೊಂದು ಕೆಲಸ ಕೊಡಿ ಎಂದು ಕೇಳಿಕೊಂಡಿದ್ದರೂ ರಾಜ್ಯದ ನಾಯಕರ ಹಿತ್ತಾಳೆ ಕಿವಿಗಳಿಗೆ ಅದಿನ್ನೂ ಬಿದ್ದಿಲ್ಲ. [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

Hanumanthappa death anniversary : Wife Mahadevi still in search of job

ಹನುಮಂತಪ್ಪ ಕೊಪ್ಪದ್ ಹುತಾತ್ಮನಾದ ಮರುದಿನ, ಅಂದರೆ ಫೆಬ್ರವರಿ 12ರಂದು ಕುಂದಗೋಳ ತಾಲೂಕಿನ ಬೆಟ್ಟದೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹನುಮಂತಪ್ಪನ ಪತ್ನಿ ಮಹಾದೇವಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ವಾಗ್ದಾನ ನೀಡಿದ್ದರು.

ಅಷ್ಟು ಮಾತ್ರವಲ್ಲ, ಹನುಮಂತಪ್ಪನ ಹುಟ್ಟೂರಾದ ಬೆಟ್ಟದೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತದೆ. ಬೆಟ್ಟದೂರಿನಲ್ಲಿ ನಾಲ್ಕು ಎಕರೆ ಜಮೀನು, 25 ಲಕ್ಷ ರುಪಾಯಿ ಪರಿಹಾರ ಮತ್ತು ಹುಬ್ಬಳ್ಳಿಯಲ್ಲಿ ಒಂದು ನಿವೇಶನ ನೀಡುವುದಾಗಿ ಕೂಡ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. [ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ]

Hanumanthappa death anniversary : Wife Mahadevi still in search of job

ಆ ಭರವಸೆಗಳೆಲ್ಲ ಸಿದ್ದರಾಮಯ್ಯನವರಿಗೆ ಯಾಕೆ ನೆನಪಿಲ್ಲ? ವಿದರ್ಭದ ವಿಧವೆ ಕಲಾವತಿಗೆ ಸಹಾಯ ಮಾಡಬೇಕೆಂದು ಲೋಕಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದ ರಾಹುಲ್ ಗಾಂಧಿಯವರು ಮಹಾದೇವಿಗಾಗಿ ಒಂದು ಕೆಲಸ ಕೊಡಿಸಿಕೊಂಡು ತಮ್ಮದೇ ಪಕ್ಷದವರಾದ ಸಿದ್ದರಾಮಯ್ಯನವರಿಗೆ ಏಕೆ ಹೇಳಿಲ್ಲ?

ಹತ್ತನೇ ಕ್ಲಾಸ್ ಪಾಸ್ ಆಗಿರುವ ಮಹಾದೇವಿಗೆ ಸೂಕ್ತವಾದ ಸರಕಾರಿ ಕೆಲಸ ಕೊಡಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಿಲ್ಲವೆ? ಸಿದ್ದರಾಮಯ್ಯನವರು ಸಿಕ್ಕಾಪಟ್ಟೆ ಬಿಜಿ. ಆದರೆ, ಹುಬ್ಬಳ್ಳಿಯನ್ನು ಪ್ರತಿನಿಧಿಸುವ ಜಗದೀಶ್ ಶೆಟ್ಟರ್ ಅವರಿಗೇನಾಗಿದೆ? ಅವರೇಕೆ ಈ ಬಗ್ಗೆ ಗಮನ ಹರಿಸಿಲ್ಲ?

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹನುಮಂತಪ್ಪ ಕೊಪ್ಪದ್ ಹೆಂಡತಿ ಮಹಾದೇವಿಗೆ ಸರಕಾರಿ ಕೆಲಸ ನೀಡದಿರುವ ಹಿಂದಿನ 'ರಾಜಕೀಯ ಕಾರಣ'ವಾದರೂ ಏನು? ಸಿದ್ದರಾಮಯ್ಯ ಮತ್ತು ಜಗದೀಶ್ ಶೆಟ್ಟರ್ ಅವರು ಉತ್ತರಿಸುವರೆ? [ಕರ್ನಾಟಕ ಹೆಮ್ಮೆಯ ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahadevi, wife of Lance Naik Hanumanthappa Koppad is still in search of government job. 10th Class pass, she needs a job in\around Hubblli. By the way, February 11th is 1st death anniversary of the braveheart.
Please Wait while comments are loading...