GST ಎಫೆಕ್ಟ್:ಕ್ರೀಡಾ ಸಾಮಾಗ್ರಿಗಳ ವ್ಯಾಪಾರದಲ್ಲಿ ಭಾರೀ ಕುಸಿತ
ಹುಬ್ಬಳ್ಳಿ, ಜುಲೈ 6: ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ನಂತರ ಕ್ರೀಡಾ ಸಲಕರಣೆಗಳ ತೆರಿಗೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಕ್ರೀಡಾ ಸಾಮಗ್ರಿಗಳ ವ್ಯಾಪಾರದಲ್ಲಿ ಭಾರೀ ಕುಸಿತವಾಗಿದ್ದು, ವ್ಯಾಪಾರಿಗಳು ಆತಂಕಕ್ಕಿಡಾಗಿದ್ದಾರೆ.
ಜಿಎಸ್‌ಟಿಗೂ ಮೊದಲು ಎಲ್ಲಾ ಕ್ರೀಡಾ ಸಲಕರಣೆಗಳ ಮೇಲೆ ಶೇ 5.5ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಹೊಸ ನಿಯಮ ಜಾರಿಯಾದ ಬಳಿಕ ಕೆಲ ಕ್ರೀಡಾ ವಸ್ತುಗಳನ್ನು ಪ್ರತ್ಯೇಕಿಸಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‌ಟಿ ನಂತರ ತೆರಿಗೆ ಪ್ರಮಾಣ ಹೆಚ್ಚಾಗಿದ್ದು, ವಾಲಿಬಾಲ್, ಬ್ಯಾಡ್ಮಿಂಟನ್ ಕಾಕ್, ಟೆನಿಸ್ ರ‍್ಯಾಕೆಟ್, ಸ್ಕಿಪಿಂಗ್, ರಿಂಗ್, ಕ್ರಿಕೆಟ್ ಬ್ಯಾಟ್‌ಗಳಿಗೆ ಶೇ ೧೨ ರಷ್ಟು, ಟ್ರೋಫಿಗಳಿಗೆ ಶೇ ೧೮ರಷ್ಟು ಮತ್ತು ಜಿಮ್ ಸಲಕರಣೆಗಳಿಗೆ ಶೇ ೨೮ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.

ಕಂಪೆನಿಯಿಂದಲೇ ಸ್ಥಗಿತ
ಜಿಎಸ್‌ಟಿ ಜಾರಿಯ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ತಿಳಿಸಿದ್ದರಿಂದ ಕ್ರೀಡಾ ಸಾಮಾಗ್ರಿ ಉತ್ಪಾದಿಸುವ ಕಂಪನಿಗಳು ಕ್ರೀಡಾ ಸಾಮಗ್ರಿಗಳನ್ನು ಕಳುಹಿಸುತ್ತಿಲ್ಲ. ಆದ್ದರಿಂದ ಇಲ್ಲಿನ ವ್ಯಾಪಾರಸ್ಥರು ತಮ್ಮಲ್ಲಿ ಸಂಗ್ರಹವಿರುವ ವಸ್ತುಗಳನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಪಂಜಾಬ್‌ನ ಜಲಂಧರ್, ಉತ್ತರ ಪ್ರದೇಶದ ಮೀರತ್ ಮತ್ತು ಮುರಾದಬಾದ್‌ನಿಂದ ಹೆಚ್ಚು ಕ್ರೀಡಾ ಸಾಮಾಗ್ರಿಗಳು ಹುಬ್ಬಳ್ಳಿಯಲ್ಲಿ ಮಾರಾಟವಾಗುತ್ತಿದ್ದು, ಕಂಪನಿಗಳು ಈಗ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿಲ್ಲ.

2,000ಕ್ಕೆ ಕುಸಿದ ವ್ಯಾಪಾರ
ಜಲಂಧರ್, ಮೀರತ್ ಜತೆಗೆ ಹರಿಯಾಣದ ಅಂಬಾಲದಿಂದಲೂ ಹುಬ್ಬಳ್ಳಿಗೆ ಕ್ರೀಡಾ ಸಾಮಾಗ್ರಿಗಳು ಸರಬರಾಜಾಗುತ್ತಿಲ್ಲ. ಉಳಿದಿರುವ ಹಳೆಯ ವಸ್ತುಗಳನ್ನೇ ಖಾಲಿ ಮಾಡಿದರೆ ಸಾಕು ಎನ್ನುತ್ತಿರುವ ವ್ಯಾಪಾರಸ್ಥರ ವಹಿವಾಟು 8 ಸಾವಿರದಿಂದ 2 ಸಾವಿರಕ್ಕೆ ಇಳಿದಿದೆ. ಇದರ ಮಧ್ಯೆಯೇ ವಾಲಿಬಾಲ್ ಕ್ರೀಡೆಗೆ ಸಂಬಂಧಿಸಿದ ಸಾಮಾಗ್ರಿಗಳೇ ಹೆಚ್ಚು ಮಾರಾಟವಾಗುತ್ತಿದ್ದು, ಉಳಿದ ಸಾಮಾಗ್ರಿಗಳನ್ನು ಕೇಳುವವರಿಲ್ಲದಂತಾಗಿದೆ.












Click it and Unblock the Notifications