Ganesh Chaturthi 2023: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ನೀಡಿದ ಪ್ರಮುಖ ಸೂಚನೆಗಳಿವು
ಹುಬ್ಬಳ್ಳಿ, ಆಗಸ್ಟ್, 24: ಹುಬ್ಬಳ್ಳಿ,-ಧಾರವಾಡ ಮಹಾನಗರದ ವಿವಿಧ ಸ್ಥಳಗಳಲ್ಲಿ 908 ಸಾರ್ವಜನಿಕ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅವುಗಳಲ್ಲಿ 664 ಸಾಮಾನ್ಯ, 184 ಸೂಕ್ಷ್ಮ ಹಾಗೂ 64 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿಷ್ಠಾಪನೆ ಮಾಡಲು ಅವಕಾಶ ಕೊಡಲಾಗಿದೆ. ಅಲ್ಲದ ಹಬ್ಬದ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ಪೊಲೀಸ್ ಅಧಿಕಾರಿಗಳು ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ 144 ಗಣೇಶಮೂರ್ತಿ ಪ್ರತಿಷ್ಠಾಪಿತವಾಗುತ್ತಿದ್ದು, ಅಲ್ಲಿಯ ಸಮಿತಿಯ ಪದಾಧಿಕಾರಿಗಳ ಜೊತೆ ಸಂಬಂಧಪಟ್ಟ ಠಾಣೆ ಅಧಿಕಾರಿಗಳು ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸ್ಥಳೀಯ ಹಾಗೂ ಸಮಾಜದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವ ಪೊಲೀಸರು, ಅಲ್ಲಿಯ ಸ್ಥಿತಿಗತಿಯ ಮಾಹಿತಿಯನ್ನು ಸೂಕ್ಷ್ಮವಾಗಿ ಸಂಗ್ರಹಿಸುತ್ತಿದ್ದಾರೆ.

ಹಿಂದೆ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಚಾಕು ಇರಿತ ಪ್ರಕರಣಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು, ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶಾಂತಿ ಕದಡುವ ಸಂಭಾವ್ಯ ವ್ಯಕ್ತಿಗಳ ಮಾಹಿತಿಯನ್ನು ಸಹ ಸಂಗ್ರಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ 2019ರಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಒಂಬತ್ತು ಚಾಕು ಇರಿತ ಪ್ರಕರಣಗಳು ದಾಖಲಾಗಿದ್ದವು. ಆಗ ಪೂರ್ವಯೋಜಿತ ಸಂಚು, ಕೋಮು ಸೌಹಾರ್ದತೆ ಕದಡುವ ಪ್ರಯತ್ನ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು.
ಶಾಂತಿ ಕದಡುವ ಕಿಡಿಗೇಡಿಗಳ ಮಾಹಿತಿ ಸಂಗ್ರಹಿಸಿ ನಿಗಾ ಇಡಲಾಗುತ್ತಿದೆ. ರೌಡಿಗಳ ಪಟ್ಟಿ ಪರಿಶೀಲನೆ ನಡೆಸುತ್ತಿದ್ದು, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ರೌಡಿಗಳನ್ನು ಗಡಿಪಾರು ಮಾಡಲಾಗುತ್ತಿದೆ. ಕೆಲವರಿಂದ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗದಂತೆ ಪೆಂಡಾಲ್‌ಗಳನ್ನು ಹಾಕಲು ಸೂಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಸಂಬಂಧಪಟ್ಟ ಸಮಿತಿಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು.
ಅಲ್ಲದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿರುವ ಷರತ್ತುಗಳನ್ನು ಪಾಲಿಸಿ, ಎಲ್ಲ ಪೆಂಡಾಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ಮಾಹಿತಿ ತಂತ್ರಜ್ಞಾನ ವಿಭಾಗದ ಸಿಬ್ಬಂದಿ ನಿಗಾ ಇಟ್ಟಿದ್ದು, ಆಕ್ಷೇಪಾರ್ಹ ಬರಹ, ಚಿತ್ರ ಹಾಗೂ ಫೋಟೊಗಳನ್ನು ಹಂಚಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಈ ಬಾರಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಯಾವುದೇ ರೀತಿಯ ಅರ್ಜಿ ಬಂದಿಲ್ಲ. ಮಹಾನಗರ ಪಾಲಿಕೆ ಠರಾವು ಪಾಸ್ ಮಾಡಿದ ನಂತರ ಶಾಂತಿ ಸುವ್ಯವಸ್ಥೆ ಸಲುವಾಗಿ ನಮ್ಮನ್ನ ಮಾಹಿತಿಗೆ ಸಲಹೆ ಕೇಳುತ್ತಾರೆ. ಅದು ಇದುವರೆಗೆ ಯಾವುದೇ ಮಾಹಿತಿ ಕೇಳಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ವರು ತಿಳಿಸಿದ್ದಾರೆ.












Click it and Unblock the Notifications