Breaking: ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ
ಹುಬ್ಬಳ್ಳಿ, ಜುಲೈ 5: ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ.
Recommended Video
ಹುಬ್ಬಳ್ಳಿಯಲ್ಲಿ ಹೋಟೆಲ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ 12.23ರ ವೇಳೆಗೆ ಡಾ.ಚಂದ್ರಶೇಖರ್ ಗುರೂಜಿ ಮೇಲೆ ದಾಳಿ ನಡೆಸಿದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹುಬ್ಬಳ್ಳಿಯ ಉಣಿಕಲ್ ರಸ್ತೆಯಲ್ಲಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ತಂಗಿದ್ದ ಡಾ. ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದ ಹಂತಕರು ಅವರನ್ನು ರಿಸೆಪ್ಷನ್ ಬಳಿಗೆ ಬರುವಂತೆ ಕರೆ ಮಾಡಿದ್ದರು. ಹೋಟೆಲ್ ರಿಸೆಪ್ಷನ್ ಬಳಿಗೆ ಆಗಮಿಸಿದ ಡಾ. ಚಂದ್ರಶೇಖರ್ ಗುರೂಜಿ ಅನ್ನು ಮೊದಲು ಆಹ್ವಾನಿಸಿದರು.
ಗುರೂಜಿ ಬಂದು ಸೋಫಾ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಒಬ್ಬರು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಮುಂದಾದನು. ಈ ವೇಳೆ ಆತನಿಗೆ ಆಶೀರ್ವದಿಸುತ್ತಿದ್ದ ಸಂದರ್ಭವನ್ನೇ ಕಾದು ನಿಂತಿದ್ದ ಮತ್ತೊಬ್ಬ ವ್ಯಕ್ತಿ ಸರಿಯಾಗಿ ಗುರೂವಿನ ಎದೆಗೆ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾನೆ.

ಬ್ಯುಸಿನೆಸ್ ವಿಚಾರಕ್ಕಾಗಿ ಹುಬ್ಬಳ್ಳಿಗೆ ಭೇಟಿ:
ಸರಳವಾಸ್ತು ಖ್ಯಾತಿಯ ಡಾ.ಚಂದ್ರಶೇಖರ್ ಗುರೂಜಿ ತಮ್ಮ ಬ್ಯುಸಿನೆಸ್ ವಿಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ನಗರದ ಉಣಿಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಬ್ಯುಸಿನೆಸ್ ಮಾತುಕತೆಗಾಗಿ ಭಕ್ತರ ಸೋಗಿನಲ್ಲಿ ಬಂದ ವ್ಯಕ್ತಿಗಳು ಚಂದ್ರಶೇಖರ್ ಗುರೂಜಿಗೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿ ಆಗಿದ್ದಾರೆ. ಈ ಸಂಬಂಧ ಆರೋಪಿಯ ಬಂಧನಕ್ಕೆ ಹುಬ್ಬಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಡಾ. ಚಂದ್ರಶೇಖರ್ ಗುರೂಜಿಯ ಮೃತದೇಹವನ್ನು ರವಾನಿಸಲಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಲಾಬೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications