Breaking; ಕೋವಿಡ್ ಪರಿಸ್ಥಿತಿ, ಏ. 27ಕ್ಕೆ ಮೋದಿ ಜೊತೆ ಸಿಎಂಗಳ ಸಭೆ
ಹುಬ್ಬಳ್ಳಿ, ಏಪ್ರಿಲ್ 24; ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 27ರಂದು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾತನಾಡಿದರು.
ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಪ್ರಧಾನ ಮಂತ್ರಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದಾರೆ" ಎಂದರು.
"ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಮೂರು ಅಲೆಗಳನ್ನು ನಿಭಾಯಿಸಿರುವ ಅನುಭವದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ಮಾತನ್ನು ಪರಿಣಿತರು ಹೇಳಿದ್ದಾರೆ" ಎಂದು ತಿಳಿಸಿದರು.

"ಈಗಾಗಲೇ ಆರೋಗ್ಯ ಸಚಿವರೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಎಪ್ರಿಲ್ 27ರಂದು ಪ್ರಧಾನ ಮಂತ್ರಿಗಳ ಜೊತೆಗಿನ ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇವೆ" ಎಂದು ಮುಖ್ಯಮಂತ್ರಿಗಳು ಹೇಳಿದರು.
"ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್ 2ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಈಗಾಗಲೇ ವಿಜ್ಞಾನಿಗಳು ಯಾವ ಮಾದರಿಯಲ್ಲಿದೆ? ಎಂದು ಪರೀಕ್ಷಿಸುತ್ತಿದ್ದಾರೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 139 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇದರಲ್ಲಿ 132 ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ರಾಜ್ಯದ ಸಕ್ರಿಯ ಪ್ರಕರಣಗಳು 1679.












Click it and Unblock the Notifications