ಗಾಯಕ್ಕೆ ಮುಲಾಮು ಹಚ್ಚಲು ಸಿದ್ದರಾಮಯ್ಯ-ಕುಮಾರಸ್ವಾಮಿ ಸಭೆ
Recommended Video
ಹುಬ್ಬಳ್ಳಿ, ಮೇ 14: ದೋಸ್ತಿ ಸರ್ಕಾರದ ನಾಯಕರ ನಡುವೆ ಮಾತಿನ ಸಮರ ಬಹಿರಂಗವಾಗಿ ನಡೆಯುತ್ತಿರುವಂತೆಯೇ ಅದಕ್ಕೆ ಮುಲಾಮು ಹಚ್ಚಲು ಪ್ರಯತ್ನಗಳು ಆರಂಭವಾಗಿವೆ.
ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಲು ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿರುವ ಸಮ್ಮಿಶ್ರ ಸರ್ಕಾರದ ನಾಯಕರು ದಿಢೀರ್ ಸಭೆ ನಡೆಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ತಂಗಿರುವ ಹೋಟೆಲ್‌ನಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರ ನಡುವೆ ಸಮಾಲೋಚನೆ ನಡೆದಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಸಚಿವ ಬಸವರಾಜ ಹೊರಟ್ಟಿ. ಸಚಿವ ಬಂಡೆಪ್ಪ ಕಾಶೆಂಪೂರ್, ಜಮೀರ್ ಅಹ್ಮದ್ ಸೇರಿದಂತೆ ಎರಡೂ ಪಕ್ಷಗಳ ಕೆಲವು ಮುಖಂಡರು ಸಭೆ ಸೇರಿದ್ದಾರೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಸತತವಾಗಿ ನೀಡುತ್ತಿರುವ ಹೇಳಿಕೆಗಳು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಲಿದೆ ಎನ್ನಲಾಗಿದೆ.
ವಿಶ್ವನಾಥ್ ಅವರ ಹೇಳಿಕೆಗಳು ಮೈತ್ರಿ ಸರ್ಕಾರಕ್ಕೆ ಆರೋಗ್ಯಯುತವಾಗಿಲ್ಲ. ಇದರಿಂದ ಕಾಂಗ್ರೆಸ್ ಶಾಸಕರು ಕೆರಳಿದ್ದಾರೆ. ಈ ಹಿಂದೆ ಜಿಟಿ ದೇವೇಗೌಡ ಅವರು ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಮತಗಳೂ ಬಿಜೆಪಿಗೆ ಬಿದ್ದಿವೆ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಈ ಕಿತ್ತಾಟ ಆರಂಭವಾಗಿದೆ. ಜೆಡಿಎಸ್ ನಾಯಕರು ಇಂತಹ ಹೇಳಿಕೆ ನೀಡದೆ ನಿಯಂತ್ರಣದಲ್ಲಿ ಇರಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಲಿದ್ದಾರೆ. ನಾಯಕರು ಮತ್ತು ಶಾಸಕರನ್ನು ಬಹಿರಂಗವಾಗಿ ಹೀಗೆ ಹೇಳಿಕೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕದಂತೆ ನೋಡಿಕೊಳ್ಳುವಂತೆ ಸೂಚನೆ ನೀಡುವುದರ ಕುರಿತು ಸಹ ಸಭೆಯಲ್ಲಿ ಚರ್ಚೆಯಾಗಲಿದೆ.
ಜತೆಗೆ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಉಪ ಚುನಾವಣೆಗಳ ಆಗುಹೋಗುಗಳ ಕುರಿತು ಸಹ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications