ಮೈತ್ರಿ ಸರ್ಕಾರವನ್ನು ಬೀಳಿಸುವುದೇ ಒಳ್ಳೆಯದು: ಜೆಡಿಎಸ್ ಮುಖಂಡ ಹೊರಟ್ಟಿ
ಹುಬ್ಬಳ್ಳಿ, ಜನವರಿ 28: ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಹೆಚ್ಚಾಗಿವೆ. ಸರ್ಕಾರವನ್ನು ಉರುಳಿಸುವುದೇ ಒಳ್ಳೆಯದೆಂದು ತೋರುತ್ತಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ, ಸುಧಾಕರ್ ಇನ್ನೂ ಕೆಲವು ಕಾಂಗ್ರೆಸ್ ಶಾಸಕರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುತ್ತಾರೆ, ಪದೇ-ಪದೇ ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರ ರಚನೆ ಮಾಡಬೇಕಾದರೆ ಆತುರಾತುರವಾಗಿ ಸರ್ಕಾರ ರಚಿಸಲಾಗಿದೆ. ಎರಡೂ ಪಕ್ಷಗಳು ಮೈತ್ರಿ ಧರ್ಮ ಪಾಲಿಸಬೇಕು, ಆದರೆ ಕಾಂಗ್ರೆಸ್ ಗಡಿ ಮೀರುತ್ತಿದೆ. ಇದು ಹೀಗೆಯೇ ಮುಂದುವರೆದರೆ ಕಷ್ಟವಾಗುತ್ತದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ವಾತಾವರಣ ಸರಿಯಿಲ್ಲ, ಇದು ಹೀಗೆಯೇ ಮುಂದುವರೆದರೆ ಬಜೆಟ್ ಮಂಡನೆ ಸಾಧ್ಯವಾಗುವುದಿಲ್ಲ, ಇದು ವಿರೋಧ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಂತೆ. ದಿನಾ ಹೀಗೆ ಗೊಂದಲಗಳ ನಡುವೆ ಸರ್ಕಾರ ನಡೆಸುವುದಕ್ಕಿಂತಲೂ ಸರ್ಕಾರವನ್ನು ಉರುಳಿಸುವುದೇ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.
ಹದ್ದು ಮೀರಿ ಮಾತನಾಡುತ್ತಿರುವ ಶಾಸಕರನ್ನು ಕಾಂಗ್ರೆಸ್ ಹಿಡಿತಕ್ಕೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಸಿದ್ದರಾಮಯ್ಯ ಅವರ ಮೇಲೆಯೇ ಅನುಮಾನ ಬರುತ್ತದೆ. ಕಾಂಗ್ರೆಸ್ ಶಾಸಕರ ಮಾತುಗಳಿಂದ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವ ಮಾತನ್ನಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಕೂಡಲೇ ಕಾಂಗ್ರೆಸ್ ತನ್ನ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು, ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು, ಕುಮಾರಸ್ವಾಮಿ ಅವರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿ ಮಾಡಿಕೊಡಬೇಕು. ಇಲ್ಲವಾದರೆ ಅವರ ದಾರಿ ನೋಡಿಕೊಳ್ಳಲಿ ಎಂದು ಖಾರವಾಗಿ ಹೊರಟ್ಟಿ ನುಡಿದರು.
ಬಜೆಟ್ ಮಂಡನೆ ಹತ್ತಿರ ಬಂದಿದೆ. ಹೀಗೆ ದಿನವೂ ಸಿಎಂ ಅವರಿಗೆ ತೊಂದರೆ ಕೊಟ್ಟರೆ ಅದರ ಪರಿಣಾಮ ಬಜೆಟ್ ಮಂಡನೆ ಮೇಲೆ ಆಗುತ್ತದೆ. ಸಿದ್ದರಾಮಯ್ಯ ಅವರ ಮೇಲೆ ಅವರ ಶಾಸಕರಿಗೆ, ಸಚಿವರಿಗೆ ಪ್ರೀತಿ ಇದೆ ಅದಕ್ಕೆ ಅಡ್ಡಿಯಿಲ್ಲ, ಆದರೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಹೊರಟ್ಟಿ ಹೇಳಿದರು.












Click it and Unblock the Notifications