Breaking; ಹುಬ್ಬಳ್ಳಿ ಗಲಭೆ ಆರೋಪಿಗೆ 2ನೇ ಪಿಯು ಪರೀಕ್ಷೆಗೆ ಅನುಮತಿ
ಹುಬ್ಬಳ್ಳಿ, ಏಪ್ರಿಲ್ 21; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ಆರೋಪಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋರ್ಟ್ ಒಪ್ಪಿಗೆ ನೀಡಿದೆ. ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ಹಿರೇಮಠ ಪರ ವಕೀಲ ಸಂಜು ಬಡಸ್ಕರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆರೋಪಿ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಜೈಲಿನಲ್ಲಿ ಓದಲು, ಪುಸ್ತಕ ಮತ್ತು ಇತರ ವ್ಯವಸ್ಥೆ ಮಾಡಬೇಕು ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

ಅಭಿಷೇಕ್ ಹಿರೇಮಠ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ. ಶುಕ್ರವಾರದಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತದೆ. ಪೊಲೀಸ್ ಭದ್ರತೆಯಲ್ಲಿಯೇ ಆರೋಪಿ ಅಭಿಷೇಕ್ ಪರೀಕ್ಷೆ ಬರೆಯಬೇಕಿದೆ.
ಅಭಿಷೇಕ್ ಹಿರೇಮಠ ವಾಟ್ಸಪ್‌ನಲ್ಲಿ ಎಡಿಟ್ ಮಾಡಿದ ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು. ಪೊಲೀಸರ ಮೇಲೆ, ಆಸ್ಪತ್ರೆ, ಆಂಜನೇಯ ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಏಪ್ರಿಲ್ 16ರ ರಾತ್ರಿ ಹುಬ್ಬಳ್ಳಿ ಪೊಲೀಸರು ಅಭಿಷೇಕ್ ಹಿರೇಮಠ ಬಂಧಿಸಿದ್ದರು. ಏಪ್ರಿಲ್ 18ರಂದು ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಆರೋಪಿ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿದೆ.
ಪರೀಕ್ಷೆಗಳು ಆರಂಭ; ಏಪ್ರಿಲ್ 22ರಿಂದ ಮೇ 18ರ ತನಕ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಹಾಜರಾಗುವವರು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ ಸಂಕೇತದ ವಸ್ತ್ರಗಳನ್ನು ಧರಿಸಿಕೊಂಡು ಬರಲು ಅವಕಾಶ ನೀಡಿಲ್ಲ.












Click it and Unblock the Notifications