ಧಾರವಾಡದಲ್ಲಿ ಚಿತ್ರಸಂತೆ: ಕಲಾವಿದರಿಗೆ ಅವಳಿ ನಗರದ ಕಲಾಸಕ್ತರ ಶಬ್ಬಾಶ್ ಗಿರಿ
ಬಣ್ಣಗಳ ಚಿತ್ತಾರ, ಕಲಾವಿದನ ಕಲ್ಪನೆಗೆ ಬಣ್ಣದ ರಂಗು, ಕುಂಚದಲ್ಲಿ ಅರಳಿದ ಇತಿಹಾಸ, ಸಂಸ್ಕೃತಿ, ಗ್ರಾಮೀಣ ಸೊಗಡು, ಪ್ರಕೃತಿ ಸೊಗಡಿನ ವೈಭವವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣ ಸಮೀಪದ ರಸ್ತೆಯಲ್ಲಿ ಜನಸಾಗರ ಸೇರಿತ್ತು.
ಹುಬ್ಬಳ್ಳಿ, ಜನವರಿ 30: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ದಿನವೂ ಜನಜಂಗುಳಿಯಿಂದ, ಗದ್ದಲ ಗಲಾಟೆಯಿಂದ ಕೂಡಿರುತ್ತಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇಂದು ಸಾಕಷ್ಟು ವೈವಿಧ್ಯಮಯ ಕಲೆಯ ಅನಾವರಣಕ್ಕೆ ಸಾಕ್ಷಿಯಾಯಿತು.
ಬಣ್ಣಗಳ ಚಿತ್ತಾರ, ಕಲಾವಿದನ ಕಲ್ಪನೆಗೆ ಬಣ್ಣದ ರಂಗು, ಕುಂಚದಲ್ಲಿ ಅರಳಿದ ಇತಿಹಾಸ, ಸಂಸ್ಕೃತಿ, ಗ್ರಾಮೀಣ ಸೊಗಡು, ಪ್ರಕೃತಿ ಸೊಗಡಿನ ವೈಭವವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣ ಸಮೀಪದ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆವರಣಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿ ಡಾ. ಮಿಣಜಗಿ ಕಲಾ ಆರ್ಟ್ ಗ್ಯಾಲರಿ ವತಿಯಿಂದ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು. ಅನೇಕ ಕಲಾವಿದರ ಕುಂಚದಲ್ಲಿ ಅರಳಿದ ಚಿತ್ರಕಲೆಗಳು ಧಾರವಾಡ ಜಿಲ್ಲೆಯ ಕಲಾಸಕ್ತರ ಮನತಣಿಸಿದವು.

ಇನ್ನು ದೇಶದ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಚಿತ್ರಸಂತೆಯ ಸೊಬಗನ್ನು ಇನ್ನೂ ಹೆಚ್ಚಿಸಿವೆ. ಪರಿಸರ, ವನ್ಯಜೀವಿಗಳು, ದೇವಸ್ಥಾನ, ಹೂವು ಕಟ್ಟುವ ಮಹಿಳೆ, ಗ್ರಾಮೀಣ ಸೊಗಡು, ದಿವಂಗತ ಪುನೀತ್ ರಾಜ್‌ಕುಮಾರ್ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿ, ಡಾ.ಅಂಬೇಡ್ಕರ್, ಬುದ್ಧ-ಬಸವ, ವಿಶ್ವ ಪ್ರಸಿದ್ಧ ನಾಯಕರು, ರೂಪದರ್ಶಿಯರು, ಕೃಷಿಕರ ಬದುಕು, ದೇವರು, ಕಾಲುದಾರಿ, ಸೂರ್ಯಾಸ್ತ ಹಾಗೂ ಸೂರ್ಯೋದಯ, ನದಿಗಳ ಹರಿವು, ನೀರು ಕುಡಿಯುತ್ತಿರುವ ಜಿಂಕೆ, ದೈವ ಕೋಲ, ಕಾಡು ಹಣ್ಣುಗಳು, ಎಳನೀರಿನ ವ್ಯಾಪಾರಿ, ಪಾನಿಪುರಿ ವ್ಯಾಪಾರಿ, ಹಳೇ ನಗರದ ಸೊಬಗು, ಬೆಟ್ಟಗಳ ಸಾಲು, ಗ್ರಾಮೀಣ ಮನೆ ಹೀಗೆ ಹಲವು ವಿಷಯಗಳು ಕಲಾವಿದನ ಕುಂಚದಲ್ಲಿ ಚಿತ್ರದ ರೂಪ ಪಡೆದಿದ್ದವು.
ಮಹಿಳೆಯರ ಭಾವ, ಜಾನಪದ ಸಂಸ್ಕೃತಿ ಹಾಗೂ ಶಿಲ್ಪಕಲೆಗಳ ಚಿತ್ರ ಸೇರಿದಂತೆ ಹತ್ತಾರು ವಿಷಯಗಳು ಕಲಾವಿದನ ಕುಂಚದಲ್ಲಿ ಅರಳಿದ್ದು, ನೋಡುಗರ ಗಮನ ಸೆಳೆದವು.

ಡಾ. ಮಿಣಜಗಿ ಕಲಾ ಆರ್ಟ್ ಗ್ಯಾಲರಿ ವತಿಯಿಂದ ಆಯೋಜಿಸಲಾಗಿದ್ದ ಚಿತ್ರಸಂತೆಯಲ್ಲಿ 500ಕ್ಕೂ ಹೆಚ್ಚು ಕಲಾ ಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅನೇಕ ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಚಿತ್ರ ಪ್ರದರ್ಶನ ಹಾಗೂ ಮಾರಾಟ ನಡೆಸಿದರು. ಜಲವರ್ಣ, ತೈಲವರ್ಣ, ಮರಳಿನ ಚಿತ್ರಕಲೆ, ಆ್ಯಕ್ರಿಲಿಕ್ ಪೇಂಟಿಂಗ್, ಮಧುಬನಿ, ಡಿಜಿಟಲ್ ಕಲೆ, ರಾಜಸ್ಥಾನಿ ಶೈಲಿಯ ಕಲಾಕೃತಿಗಳು ಎಲ್ಲರ ಗಮನ ಸೆಳೆದವು. ಒಂದಕ್ಕಿಂತ ಒಂದು ಕಲಾಕೃತಿಗಳು ನೋಡುಗರ ಆಲೋಚನೆಯನ್ನು ಹೆಚ್ಚಿಸಿದವು. ಇದರ ಜೊತೆಗೆ ಚಿತ್ರಸಂತೆಯಲ್ಲಿ ವಿಭಿನ್ನ ಕರಕುಶಲ ವಸ್ತುಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು.












Click it and Unblock the Notifications