ಬರ ಪರಿಹಾರ ನಿಧಿಗೆ ಕಡಿಮೆ ಹಣ: ಜೆಡಿಎಸ್ ಪ್ರತಿಭಟನೆ ನಿರ್ಧಾರ

Posted By:
Subscribe to Oneindia Kannada

ಹುಬ್ಬಳ್ಳಿ, ಜನವರಿ 6: ಬರ ಪರಿಹಾರ ನೀಡಿಕೆ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಳೆದಿರುವ ಬಿಜೆಪಿ ಸಾರಥ್ಯದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಪಕ್ಷವು ತಾನು ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ಹಣ ನೀಡುತ್ತಿದೆ. ಆದರೆ, ತನ್ನ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಕಡಿಮೆ ಮೊತ್ತದ ಧನಸಹಾಯ ನೀಡುತ್ತಿದೆ. ಹೀಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಜೆಡಿಎಸ್ ಪಕ್ಷವು ಪ್ರತಿಭಟನೆ ನಡೆಸಲಿದೆ ಎಂದರು.

ತಮ್ಮ ಆರೋಪಕ್ಕೆ ಪೂರಕವಾಗಿ, ಅಂಕಿ, ಅಂಶ ನೀಡಿದ ಅವರು, ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರಕ್ಕೆ ಕೇಂದ್ರ ಸರಕಾರ 3100 ಕೋಟಿ ಬರ ಪರಿಹಾರ ನೀಡಲಾಗಿದೆ. ಮಧ್ಯಪ್ರದೇಶಕ್ಕೆ 2022 ಕೋಟಿ ನೀಡಲಾಗಿದ್ದು, ದೇಶದ ಅತ್ಯಂತ ಸಣ್ಣ ರಾಜ್ಯ ಛತ್ತಿಸಗಡಕ್ಕೆ 1672 ಕೋಟಿ ಅನುದಾನ ಕೊಡಲಾಗಿದೆ. ಕರ್ನಾಟಕ ಸರ್ಕಾರ ಕೋರಿದ್ದ 4702 ಕೋಟಿ ಬದಲು ಕೇವಲ 1782 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

central government should release more funds to Karnataka says navlgund mla konreddi

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಪದೆ ಪದೇ ಅನ್ಯಾಯವಾಗುತ್ತಿರುವುದು ಬೇಸರ ಮೂಡಿಸಿದೆ. ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೆ ಜೆಡಿಎಸ್ ಪಕ್ಷವು ರಾಜ್ಯಾದ್ಯಂತ ಬೀದಿಗಿಳಿದು ರೈತರೊಂದಿಗೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದ ಅವರು, ಬೇರೆ ರಾಜ್ಯಕ್ಕೆ ಹೊಲಿಸಿದರೆ ಅತಿ ಕಡಿಮೆ ಅನುದಾನ ಬಿಡುಗಡೆ ಮಾಡಿರುವುದು ಸರಿಯಲ್ಲಎಂದು ಕೋನರೆಡ್ಡಿ ಕಿಡಿಕಾರಿದರು.

ರಾಜ್ಯದ 139 ತಾಲೂಕುಗಳು ಭೀಕರ ಬರಗಾಲದಿಂದ ತತ್ತರಿಸಿದ್ದು, ಸುಮಾರು 1500 ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಮೋದಿ ಸರಕಾರ 4702 ಕೋಟಿ ಬರ ಪರಿಹಾರ ಪೈಕಿ ಕೇವಲ 1782 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 17 ಸಾವಿರ ಕೋಟಿ ಹಾನಿ ಸಂಭವಿಸಿದ್ದರೂ, ರಾಷ್ಟ್ರೀಯ ನೈಸರ್ಗಿಕ ಹಾಗೂ ವಿಪತ್ತು ನಿಧಿಯ ನಿಯಮಾವಳಿಗಳ ಪ್ರಕಾರ ಕೇವಲ 4782 ಕೋಟಿ ಪರಿಹಾರ ಕೇಳಲಾಗಿತ್ತು. ಅದರ ಬಿಡುಗಡೆಗೂ ಕೇಂದ್ರ ಮೀನಾಮೇಷ ಎಣಿಸುವ ಮೂಲಕ ರಾಜ್ಯದ ಬಗ್ಗೆ ತನ್ನ ನಿರ್ಲಕ್ಷ್ಯ ಮುಂದುವರೆಸಿದೆ.

ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ಕೂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 30ರಂದು ಸರ್ವಪಕ್ಷ ನಿಯೋಗದ ಮೂಲಕ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟರೂ, ಕೇಂದ್ರ ಸರಕಾರ ರಾಜ್ಯದ ನೆರವಿಗೆ ಧಾವಿಸದಿರುವುದು ಖಂಡನೀಯ ಎಂದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ದೇಶದ ಎಲ್ಲ ರಾಜ್ಯಗಳ ಬಗ್ಗೆ ಭೇದಭಾವ ತೋರುವುದು ಸರಿಯಲ್ಲವೆಂದರು.

ನಿಯಮಾವಳಿ ಬದಲಾಗಲಿ: ಕೇಂದ್ರದ ರಾಷ್ಟ್ರೀಯ ನೈಸರ್ಗಿಕ ಹಾಗೂ ವಿಪತ್ತು ನಿಧಿಯ ನಿಯಮಾವಳಿಗಳನ್ನು ಬದಲಿಸಲು ಈ ಹಿಂದಿನಿಂದಲೂ ಜೆಡಿಎಸ್ ರಾಜ್ಯ ಹಾಗೂ ಕೇಂದ್ರಕ್ಕೆ ಒತ್ತಡ ಹಾಕುತ್ತಾ ಬಂದಿದೆ. ಆದರೂ ಈವರೆಗೆ ಕೇಂದ್ರ ಸರ್ಕಾರ ಆ ನಿಯಮಗಳ ಬದಲಾವಣೆಗೆ ಮುಂದಾಗಿಲ್ಲ. ಇದರಿಂದ ರೈತ ಸಮೂಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ನಿಯಮಗಳ ತಿದ್ದುಪಡಿ ತಂದು ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಮುಂದಾಗಬೇಕು ಎಂದು ಶಾಸಕ ಕೋನರಡ್ಡಿ ಆಗ್ರಹಿಸಿದ್ದಾರೆ.

ರಾಜ್ಯಕ್ಕೆ ಮಹದಾಯಿ, ಕಳಸಾ-ಬಂಡೂರಿ ವಿಷಯ, ಬರಗಾಲ, ಅನಾವೃಷ್ಠಿ ಹಾಗೂ ಅತಿವೃಷ್ಠಿ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ರೀತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿರುವುದು ನೋವಿನ ಸಂಗತಿ ಎಂದೂ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬರ ಪರಿಹಾರ ವಿಷಯದಲ್ಲಿ ರಾಜ್ಯದ ರೈತರೊಂದಿಗೆ ಮಲತಾಯಿ ಧೋರಣೆ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ರಾಜ್ಯದ ರೈತರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಸಂಸದರ ಮೌನವೇಕೆ?: ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ, ಪ್ರಚಾರ ತೆಗೆದುಕೊಳ್ಳುವ ಬಿಜೆಪಿ ಮುಖಂಡರಿಗೆ ದೆಹಲಿಗೆ ಹೋಗಿ ತಮ್ಮ ನಾಯಕರ ಮನವೊಲಿಸಿ, ಕೇಂದ್ರ ಸರಕಾರದಿಂದ ಹೆಚ್ಚಿನ ಬರ ಪರಿಹಾರ ಕೊಡಿಸಲು ಸಾಧ್ಯವಾಗದಿರುವುದು ನೋವಿನ ಸಂಗತಿಯಾಗಿದೆ. ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ ರಾಜ್ಯದೊಂದಿಗೆ ಈ ರೀತಿಯ ನಿರ್ಲಕ್ಷ್ಯ ಅನುಸರಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೇಂದ್ರ ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯ ಮಾಡಿದರೂ, ರಾಜ್ಯದ ಬಿಜೆಪಿಯ ಘಟಾನುಘಟಿ ನಾಯಕರು, 17 ಸಂಸದರು ಏಕೆ ಮೌನವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದರೆ, ಜಾನುವಾರುಗಳಿಗೆ ಸಮರ್ಪಕ ಮೇವು ಸಿಗುತ್ತಿಲ್ಲ. ಕೆರೆ ಹೂಳೆತ್ತುವುದು ಸೇರಿದಂತೆ ರಾಜ್ಯದಲ್ಲಿ ಯಾವುದೇ ಬರ ಪರಿಹಾರ ಕಾಮಗಾರಿಗಳು ಈವರೆಗೆ ಆರಂಭಗೊಂಡಿಲ್ಲ. ಹೀಗಾಗಿ ಕೇಂದ್ರ ತನ್ನ ಧೋರಣೆ ಬದಲಿಸಿಕೊಂಡು, ಇನ್ನುಳಿದ ಅನುದಾನ ಬಿಡುಗಡೆಗೊಳಿಸಲಿ. ರಾಜ್ಯ ಸರಕಾರ ಕೂಡ ತನ್ನ ಪರಿಹಾರ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Navalagunda MLA N.H. Konareddy lashed out against BJP led central government for showing step mother attitude about Karnakataka. He alleged that central government doing discrimination between BJP ruled and other parties rules state governments regarding Drought fund distribution.
Please Wait while comments are loading...