Hubballi Airport: ನಾಗರಿಕ ವಿಮಾನಯಾನ ಭದ್ರತಾ ಪ್ರಾದೇಶಿಕ ಕಚೇರಿ ಹುಬ್ಬಳ್ಳಿಯಲ್ಲಿ ಆರಂಭ
ಹುಬ್ಬಳ್ಳಿ, ಆಗಸ್ಟ್ 23: ಹುಬ್ಬಳ್ಳಿಯಲ್ಲಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಆಗುತ್ತಿದೆ. ಮೇಲ್ದೆರ್ಜೆಗೆ ಏರುವ ಜೊತೆಗೆ ಎರಡನೇ ಟರ್ಮಿನಲ್ ನಿರ್ಮಾಣ ಮಾಡುವುದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಮಧ್ಯೆ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಮತ್ತೊಂದು ವಿಶೇಷ ಕಚೇರಿಯನ್ನು ತೆರೆಯಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಸಚಿವ ಪ್ರಹ್ಲಾದ್ ಜೋಶಿಯವರು, ನೂತನ ಕಚೇರಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗಿರ ಸಿಕ್ಕಂತಾಗಿದೆ. ಇಲ್ಲಿ 'ಬ್ಯುರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ ಪ್ರಾದೇಶಿಕ ಕಚೇರಿ ಆರಂಭವಾಗಿದೆ.

ಏರ್‌ಪೋರ್ಟ್‌ಗಳ ಭದ್ರತಾ ಕ್ರಮಗಳ ತೀರ್ಮಾನ ಇಲ್ಲಿಯೇ ರಾಜ್ಯದ ವಿವಿಧ ವಿಮಾನ ನಿಲ್ದಾಣ ಭದ್ರತೆ ದೃಷ್ಟಿಯಿಂದ ಕಾರ್ಯ ನಿರ್ವಹಣೆ ಮಾಡುವ ಕಚೇರಿ ಇದಾಗಿದ್ದು, ಹುಬ್ಬಳ್ಳಿಯಲ್ಲಿ ಆರಂಭವಾಗಿರುವುದು ಖುಷಿಯ ಸಂಗತಿಯಾಗಿದೆ. ಇಂತಹ ಕಚೇರಿ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಬಂದರು ನಗರ ಮಂಗಳೂರು ಹೊರೆತು ಪಡಸಿದರೆ ಉಳಿದ ಎಲ್ಲ ವಿಮಾನ ನಿಲ್ದಾಣಗಳ ಭದ್ರತಾ ಕ್ರಮಗಳ ತೀರ್ಮಾನವು ಹುಬ್ಬಳ್ಳಿಯ ಈ ಕಚೇರಿಯಲ್ಲಿಯೇ ಆಗಲಿದೆ ಅವರು ತಿಳಿಸಿದರು.
ಈ ನೂತನ ಕಚೇರಿ ಕಾರ್ಯ ನಿರ್ವಹಣೆಯನ್ನು ಸಹಾಯಕ ಕಮಿಷನರ್ ಅವರು ಮುಖ್ಯಸ್ಥರಾಗಿ ನಿರ್ವಹಿಸಲಿದ್ದಾರೆ. ಇಂತಹ ಕಚೇರಿಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಗೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.
ಗ್ರಾಹಕರ ಸಂತೃಪ್ತಿ ಸರ್ವೇಯಲ್ಲಿ ಐದನೇ ಸ್ಥಾನ
ಹುಬ್ಬಳ್ಳಿ ವಿಮಾನ ನಿಲ್ದಾಣ ತನ್ನದೇ ಆದ ರೀತಿಯಲ್ಲಿ ವಿಶೇಷತೆ ಹೊಂದಿದೆ. ದೇಶದ ವಿವಿಧ ವಿಮಾನ ನಿಲ್ದಾಣಗಳ ಪೈಕಿ ಗ್ರಾಹಕರ ಸಂತೃಪ್ತಿ ಸಮೀಕ್ಷೆಯಲ್ಲಿ 58 ನಿಲ್ದಾಣಗಳ ಪೈಕಿ ಐದನೇ ಸ್ಥಾನ ಉತ್ತರ ಕರ್ನಾಟಕದ ಹುಬ್ಬಳ್ಳಿ ಏರ್‌ಪೋರ್ಟ್ ಸಿಕ್ಕಿದೆ. ಇದೇ ವರ್ಷ ಮಾರ್ಚ್ ಮೂರನೇ ವಾರ ಇಂಥದ್ದೊಂದು ವಿಚಾರ ಪ್ರಕಟಗೊಂಡಿತ್ತು. ಆಗಲೂ ಈ ವಿಚಾರವನ್ನು ಪ್ರಹ್ಲಾದ್ ಜೋಶಿಯವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಕೆಲವು ತಿಂಗಳುಗಳ ಹಿಂದೆ ಒಟ್ಟು ಸುಮಾರು 320ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿದ್ದರು. ಎರಡನೇ ಟರ್ಮಿನಲ್ ನಿರ್ಮಾಣ ಮಾಡುವ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯ ಎಲ್ಲವು ಅಂದುಕೊಂಡಂತೆ ನೆರವೇರುತ್ತಿದೆ.
ಇದೇ ವೇಳೆ ರಾಜಕೀಯ ವಿಚಾರ ಮಾತನಾಡಿದ ಸಚಿವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ. ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಥೆಯರಿ ಕಾಂಗ್ರೆಸ್ ನದ್ದಾಗಿದೆ ಎಂದು ಸರ್ಕಾರದ ನಡೆ ಹಾಗೂ ಆರೋಪಗಳ ವಿರುದ್ಧ ಅವರು ಕಿಡಿ ಕಾರಿದರು.












Click it and Unblock the Notifications