'ರಾಜಕಾರಣಿಗಳು ಆಣೆ ಮಾಡಿ..ಮಾಡಿ..ದೇವರಿಗೂ ಸಮಸ್ಯೆ ಮಾಡಿದ್ದಾರೆ'
ಹುಬ್ಬಳ್ಳಿ, ಡಿಸೆಂಬರ್ 24: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿಯ ಸುವರ್ಣ ಸೌಧದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ರಾಜ್ಯಾದಂತ್ಯ ಸದ್ದು ಮಾಡುತ್ತಿದ್ದು, ಇದೀಗ ಪ್ರಕರಣ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ ಎಂದು ಸಿ.ಟಿ ರವಿಗೆ ಸವಾಲು ಹಾಕಿದ್ದಾರೆ.
ಈ ಬಗ್ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದು, ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ. ತಾವು ನನಗೆ ಅವಾಚ್ಯ ಶಬ್ದಗಳದ ನಿಂದನೆ ಮಾಡಿಲ್ಲ ಅಂತಾ ಪ್ರಮಾಣ ಮಾಡಿ ಅಂತಾ ಆಹ್ವಾನ ನೀಡಿದ್ದು ಸರಿಯಲ್ಲ. ಈಗ ಯಾವ ಆಣೆ ಪ್ರಮಾಣ ನಡೆಯುತ್ತದೆ? ಪ್ರಮಾಣದ ಮೇಲೆ ಯಾರಿಗೆ ನಂಬಿಕೆಯಿದೆ? ಎಂದು ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕಾರಣಿಗಳು ಆಣೆ ಮಾಡಿ, ಮಾಡಿ ದೇವರಿಗೂ ಸಮಸ್ಯೆ ಮಾಡಿದ್ದಾರೆ. ಸುಳ್ಳು ಹೇಳಿ ಆಣೆ ಮಾಡುತ್ತಾರೆ . ಮನುಷ್ಯನಿಗೆ ನಾನೇನು ಎನ್ನುವ ಸ್ಪಷ್ಟತೆ ಇದ್ದರೆ. ಸಾಕು ಆಣೆ ಪ್ರಮಾಣ ಅವಶ್ಯಕತೆ. ಆದರೆ ಸುವರ್ಣ ಸೌಧದಲ್ಲಿ ಸಿ.ಟಿ ರವಿ ವಿರುದ್ಧ ಕೂಡ ಬಹಳಷ್ಟು ಅಸಭ್ಯವಾಗಿ ಮಾತನಾಡಿದ್ದಾರೆ. ನಿನ್ನ ಹೆಣ ಪಾರ್ಸೆಲ್ ಮಾಡುತ್ತೇವೆ ಎಂದು ಯಾರು ಬಳಸಬಾರದು ಅಂತಹ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದಾರೆ. ಇದು ದುರ್ದೈವದ ಸಂಗತಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಿಸಿದರು.
ಇದರ ಜೊತೆಗೆ ದಾಳಿ ಮಾಡಿದವರು ಯಾರ ಪಿಎಗಳು? ಏನು ಇದು ಪಿಎಗಳ ಆಡಳಿತನಾ? ಜಿಲ್ಲಾ ಉಸ್ತುವಾರಿ, ಗೃಹ ಸಚಿವರಿಗೆ ಗೊತ್ತಿಲ್ಲದೆ ಇದನ್ನು ಮಾಡಿದ್ದು ಯಾರು? ಯಾರ ಅಣತಿ ಅಂತೆ ರಾತ್ರಿ ಪ್ರಕರಣ ನಡೆದಿದೆ. ಇಬ್ಬರು ಸಚಿವರ ಅಣತಿಯಂತೆ ನಡೆದಿದೆ ಎಂದು ಆರೋಪ ಮಾಡಿದ ಅವರು, ಇಡೀ ಪ್ರಕರಣ ಸಿಐಡಿ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಹತ್ತು ನಿಮಿಷಕ್ಕೊಮ್ಮೆ ಪೊಲೀಸರಿಗೆ ಕರೆ ಮಾಡಿದವರು ಯಾರು? ಅದು ಮೊದಲು ಗೊತ್ತಾಗಲಿ. ತನಿಖೆಯಲ್ಲಿ ಸತ್ಯ ಸಂಪೂರ್ಣ ಹೊರಬರಲೇ ಬೇಕು. ಅದೇ ನಮ್ಮ ಆಶಯ. ಅವರ ಫೋನ್ ಕಾಲ್ ಲಿಸ್ಟ್ ತೆಗೆಸಿದರೆ ಗೊತ್ತಾಗಲಿದೆ. ರಾತ್ರಿ ಸಿ.ಟಿ ರವಿ ಸುತ್ತಾಡಿಸಿದ ಮಹಾನ್ ನಾಯಕರು ಯಾರು? ಗೃಹ ಸಚಿವರನ್ನು 100% ಬ್ಲಾಕ್ ಇಡುವ ಕಾರ್ಯ ಆ ಮಹಾನ್ ನಾಯಕರು ಮಾಡಿದ್ದಾರೆ. ಹೀಗಾಗಿ ಸಿಐಡಿ ನಿಷ್ಪಕ್ಷಪಾತ ತನಿಖೆ ಮಾಡಲಿ ಎಂದು ಹೇಳಿದರು.












Click it and Unblock the Notifications