ಹಬ್ಬದ ಆಚರಣೆಯನ್ನು ಹಾಳು ಮಾಡುವವರನ್ನು ಮಟ್ಟ ಹಾಕುತ್ತೇವೆ- ಶಾಸಕ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 17: ನಮ್ಮ ಸನಾತನ ಸಂಸ್ಕೃತಿ ತಿಳಿಸಿಕೊಡುವ ಕೆಲಸವನ್ನು ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳಿಗಳು ಹಲವು ವರ್ಷಗಳಿಂದ ಮಾಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಯಲ್ಲಿ ಆಚರಿಸುವ ಗಣೇಶೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. .
ಹುಬ್ಬಳ್ಳಿ ದುರ್ಗದ ಬೈಲ್‍ನಲ್ಲಿ ಇಂದು ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಧರ್ಮ ಬೆಳವಣಿಗೆ ಕಾರ್ಯ ಹೆಚ್ಚು ಹೆಚ್ಚು ಆಗಬೇಕು. ಪ್ರತಿಷ್ಠಿತ ಬಡಾವಣೆಗಳಲ್ಲಿ ಗಣೇಶೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ಹಬ್ಬ ಆಚರಿಸುವ ಸಂದರ್ಭದಲ್ಲಿ ಕಿಡಿಗೇಡಿತನ ಮಾಡಲು ನಾವು ಬಿಡುವುದಿಲ್ಲ. ಅಂತವರ ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ' ಎಂದರು.

ಇಡೀ ಮಹಾಮಂಡಳದ ತಂಡ ಉತ್ತಮ ಕೆಲಸ ಮಾಡುತ್ತಿದೆ. 14 ಇಲಾಖೆಗಳ ಸಭೆ ನಡೆಸಿ 11 ದಿನಗಳವರೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾತ್ರಿ ಹತ್ತು ಗಂಟೆ ಒಳಗಾಗಿ ಗಣೇಶ ವಿಸರ್ಜನೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ರೀತಿ ಮಾಡುವುದರಿಂದ ಮಕ್ಕಳು ಹಾಗೂ ಮಹಿಳೇಯರು ಗಣೇಶೋತ್ಸವದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ ಎಂದರು ಹೇಳಿದರು.
ಈ ವೇಳೆ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, 'ಹುಬ್ಬಳ್ಳಿ ನಗರದಲ್ಲಿ ನಿನ್ನೆ ಈದ್ ಮಿಲಾದ್ ಮೆರವಣಿಗೆ ಉತ್ತಮವಾಗಿ ನಡೆದಿದೆ. ಹುಬ್ಬಳ್ಳಿ ನಗರದಲ್ಲಿ ಹಲವಾರು ಕಹಿ ಘಟನೆಗಳನ್ನು ನಾವು ನೋಡಿದ್ದೇವೆ. ಇದರಿಂದ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಹಾಳಾಗಿ ಹೋಗಿತ್ತು. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಮೂಲಕ ಪರಸ್ಪರ ಸಹೋದರತ್ವ ಬಾಂಧವ್ಯ ಬೆಳೆಸಿಕೊಳ್ಳಬೇಕು. ಯಾರಿಗಾದರೂ ಅನಾರೋಗ್ಯ ಕಾಡಿದರೆ ಅವರು ಜಾತಿ ನೋಡಿ ಚಿಕಿತ್ಸೆ ಪಡೆಯುವುದಿಲ್ಲ. ಬದಲಾಗಿ ಆರೋಗ್ಯ ಸುಧಾರಣೆಗೆ ಮೊದಲ ಆದ್ಯತೆ ನೀಡುತ್ತಾರೆ' ಎಂದರು.

'ನಾವೆಲ್ಲ ಹರಿದು ಹಂಚಿ ಹೋದಾಗ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದು, ಅಂದಿನಿಂದ ಇಲ್ಲಿಯವರೆಗೂ ಗಣೇಶೋತ್ಸವ ನಡೆದುಕೊಂಡು ಬಂದಿದೆ. ಹಬ್ಬಗಳ ಸಂದರ್ಭದಲ್ಲಿ ಕಿಡಿಗೇಡಿಗಳು ಮಾಡುವ ಕೆಲಸವನ್ನು ನಾವು ಹತ್ತಿಕ್ಕುವ ಕೆಲಸ ಮಾಡುವ ಮೂಲಕ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸೋಣ. ಹು-ಧಾ ನಗರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಮೂರು ಸಾವಿರ ಮಠದ ಜಗದ್ಗುರುಗಳೇ ಕಾರಣ' ಎಂದು ಹೇಳಿದರು.
ಈ ಸಂಭ್ರಮದಲ್ಲಿ ಉಪಸ್ಥಿತರಿದ್ದ ಮೂರುಸಾವಿರ ಮಠ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, 'ಇಸ್ಲಾಂ ಕಾರ್ಯಕ್ರಮದಲ್ಲಿ ಹಿಂದೂಗಳು ಮಾಲಾರ್ಪಣೆ ಮಾಡಿರುವ ಕಾರ್ಯ ಶ್ಲಾಘನೀಯ ಕಾರ್ಯ. ದುರ್ಗದ ಬಯಲು ಎಂದರೆ ಎಲ್ಲವನ್ನೂ ಒಳಗೊಂಡಿದ್ದು, ಎಲ್ಲ ಜಾತಿಯ ಎಲ್ಲೆಯನ್ನು ಮೀರಿದ್ದು ಬಯಲು. ಈ ಬಯಲು ಎಲ್ಲರನ್ನೂ ಗೌರವದಿಂದ ಸ್ವಾಗತಿಸುತ್ತದೆ, ಜೊತೆಗೆ ಬೀಳ್ಕೊಡುತ್ತದೆ. ಮಹಾಮಂಡಳದ ಕೆಲಸ 2 ತಿಂಗಳು ಇರುತ್ತದೆ. ಮನೆ ಬಿಟ್ಟು ಹಗಲು ರಾತ್ರಿ ಮಂಡಳದ ಪದಾಧಿಕಾರಿಗಳು ಅವಿರತ ಕೆಲಸ ಮಾಡಿದ್ದಾರೆ' ಎಂದರು.












Click it and Unblock the Notifications