ರಾಜ್ಯದಲ್ಲಿ ಆಗುವ ಎಲ್ಲಾ ಗಲಭೆಗಳಿಗೆ ಬಿಜೆಪಿಯೇ ನೇರ ಹೊಣೆ- ಅರಣ್ಯ ಸಚಿವ ಈಶ್ವರ್ ಖಂಡ್ರೆ
ಹುಬ್ಬಳ್ಳಿ, ಸೆಪ್ಟೆಂಬರ್ 21: ರಾಜ್ಯದಲ್ಲಿ ಆಗುವ ಎಲ್ಲಾ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಕೋಮು ಗಲಭೆ ಅವರೇ ಮಾಡುವಂಥದ್ದು. ಜನರ ಭಾವನೆ ಹೇಗೆ ಕೆರಳಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಜನರ ಬಳಿ ಹೋಗಲು ಅವರಲ್ಲಿ ಯಾವುದೇ ಸಾಧನೆ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬಿಜೆಪಿ ವಿರುದ್ಧ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿರುವುದನ್ನು ಸಹಿಸಲು ಆಗದೇ ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಜಾತಿ ಜಾತಿ, ಧರ್ಮ ಧರ್ಮ ಗಳ ನಡುವೆ ವೈಷಮ್ಯ, ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜಭವನದ ಗೌಪ್ಯ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ರಾಜ್ಯಪಾಲರೇ ಉತ್ತರ ಕೊಡಬೇಕು. ರಾಜಭವನದ ಅಧಿಕಾರಿಗಳು ರಾಜ್ಯಪಾಲರ ನಿಯಂತ್ರಣದಲ್ಲಿ ಇರುತ್ತಾರೆ. ಅಲ್ಲಿ ಯಾರ ಇರಬೇಕು, ಅಧಿಕಾರಿಗಳು ಯಾರು ಬೇಕು ಎಂಬುದನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಅರಣ್ಯ ಅತಿಕ್ರಮಣವನ್ನು ತೆರವು ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅರಣ್ಯ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 3 ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಅತಿಕ್ರಮಣ ಮಾಡಿರುವ ಬಡವರು, ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಯಾರೂ ದೊಡ್ಡ ಪ್ರಮಾಣದಲ್ಲಿ ಅರಣ್ಯ ಅತಿಕ್ರಮಣ ಹಾಗೂ ನಾಶ ಮಾಡಿದ್ದಾರೆಯೋ ಅಂತವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದರು.

ತಿರುಪತಿ ಲಡ್ಡು ವಿವಾದ ಬಗ್ಗೆ ಮಾತನಾಡಿದ ಅವರು, ತಿರುಪತಿ ಲಡ್ಡು ವಿಚಾರದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಜಗಮೋಹನ್ ರೆಡ್ಡಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ನನಗೆ ಗೊತ್ತಿಲ್ಲ. ಹಾಗಾಗಿ ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕರಣದಲ್ಲಿ ಇರವರು ಜನರ ಸೇವೆ ಮಾಡಬೇಕು. ಅದನ್ನು ಬಿಟ್ಟು ಜನರನ್ನು ಶೋಷಣೆ ಮಾಡುವುದು, ಬ್ಲ್ಯಾಕ್ ಮೇಲ್ ಮಾಡುವುದು ಮಹಾದ್ರೋಹ ಎಂದರು.
ಶಾಸಕ ಮುನಿರತ್ನ ರಾಜಕೀಯ ಜೀವನದಲ್ಲಿ ಇರಲು ನಾಲಾಯಕ್
ಶಾಸಕ ಮುನಿರತ್ನ ಅವರಂಥವರು ರಾಜಕೀಯ ಜೀವನದಲ್ಲಿ ಇರಲು ಲಾಯಕ್ ಇಲ್ಲ. ಹಿಂದೆ ನಮ್ಮ ಪಕ್ಷದಲ್ಲಿ ಇದ್ದರೂ ಎಂಬುದು ಮುಖ್ಯವಲ್ಲ. ಯಾವುದೇ ಪಕ್ಷದಲ್ಲಿದ್ದರೂ ವ್ಯಕ್ತಿಯಲ್ಲ ಮಾನವೀಯ ಮೌಲ್ಯ, ನೈತಿಕ ಗುಣಗಳು ಇರಬೇಕು ಎಂದು ಹೇಳಿದರು.












Click it and Unblock the Notifications