ಜಾತಿ ಗಣತಿಗೆ ತಕರಾರಿಲ್ಲ, ಸಾಮಾಜಿಕ ಸಮೀಕ್ಷೆಗೆ ಒಪ್ಪಿಗೆ ಇಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು?
ಹುಬ್ಬಳ್ಳಿ, ಅಕ್ಟೋಬರ್ 15: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಜಾತಿ ಗಣತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವರದಿ ಜಾರಿಗೆ ಆಕ್ಷೇಪಿಸಿದ್ದಾರೆ. ಒಂದಷ್ಟು ಮಹತ್ವ ಮಾಹಿತಿಯನ್ನು ಜಾತಿ ಗಣತಿ ಬಗ್ಗೆ ಅವರು ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದರು ಅವರು, ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿ ಅಲ್ಲ ಅದೊಂದು ಸಾಮಾಜಿಕ ಸಮೀಕ್ಷೆ ಆಗಿದೆ. ಇದಕ್ಕೆ ನಮ್ಮ ತಕರಾರಿದೆ. ಸರ್ಕಾರ ಏನಾದರೂ ಜಾತಿ ಗಣತಿಯನ್ನು ಜಾರಿ ಮಾಡಲು ಹೊರಟರೇ ಅದಕ್ಕೆ ನಾವು ಒಪ್ಪಲ್ಲ ಎಂದು ಅವರು ತಿಳಿಸಿದ್ದಾರೆ.

ಜಾತಿ ಗಣತಿ ಮಾಡಲು ನಮ್ಮದೇನು ವಿರೋಧವಿಲ್ಲ. ಜಾತಿ ಗಣತಿ ಎಲ್ಲೋ ಒಂದು ಜಾಗದಲ್ಲಿ ಕುಳಿತು ಮಾಡಿದರೆ ಅದು ಸಮೀಕ್ಷೆ ಆಗುತ್ತದೆ, ಹೊರತು ಗಣತಿ ಅಲ್ಲ. ಐಬಿಯಲ್ಲಿ ಕುಳಿತುಕೊಂಡು ಮಾಡಿದರೆ ಸಮೀಕ್ಷೆ ಆಗುತ್ತದೆ. ಮನೆ ಮನೆಗೆ ತೆರಳಿ ಸರ್ವೇ ಮಾಡಬೇಕು. ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂಬುದು ನಮ್ಮ ಆಗ್ರಹ ವಿದೆ. ಈಗಿನ ಜಾತಿ ಗಣತಿ ವರದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆಗೆ ತಮ್ಮ ಸಲಹೆ ಸೂಚನೆಗಳನ್ನು ಕೇಳಿದ್ದು ನಾನು ಮುಕ್ತವಾಗಿ ಕೊಟ್ಟಿದ್ದೇನೆ. ರಾಯಣ್ಣ ಮತ್ತು ಚನ್ನಮ್ಮ ನಮ್ಮ ಸಾಂಸ್ಕ್ರತಿಕ ನಾಯಕರು. ಅವರ ಹೆಸರಿನಲ್ಲಿ ಹಿಂದುಳಿದ ವರ್ಗದ ಏಳಿಗೆ ಹಾಗೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ಸಂಘಟನೆ ಮಾಡಲು ಕೆಎಸ್ ಈಶ್ವರಪ್ಪಗೆ ಹೇಳಿದ್ದು ನಿಜ. ರಾಯಣ್ಣ, ಚೆನ್ನಮ್ಮ ಬ್ರಿಗೆಡ್ ಕುರಿತಂತೆ ಬಾಗಲಕೋಟೆಯಲ್ಲಿ ನಡೆಯುವ ಸಭೆಗೆ ನನಗೂ ಆಹ್ವಾನ ಇದೆ. ನಾನೂ ಈಗ ಮೀಸಲಾತಿ ಹೋರಾಟದಲ್ಲಿ ಒತ್ತಡದಲ್ಲಿದ್ದೇನೆ ಎಂದು ತಿಳಿಸಿದರು.
ಅಕ್ಟೋಬರ್ 18ರಂದು ಸಿಎಂ ಕಚೇರಿಯಲ್ಲಿ ಸಭೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆ, ಹೋರಾಟ ಹಲವು ವರ್ಷಗಳಿಂದ ಮುಂದುವರಿದಿದೆ. ಮೀಸಲಾತಿ ಸಿಗುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿಯಲ್ಲಿ ಅ. 18ರಂದು ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ. ಅವರು 2 ಬಾರಿ ಕೊಟ್ಟ ಮಾತಿಗೆ ತಪ್ಪಿದ್ದಾರೆ.
ಇನ್ನೂ ಬೇಡಿಕೆ ಈಡೇರಿಕೆಗಾಗಿ ಸಮಾಜದ ವಕೀಲರೂ ಪ್ರತಿಭಟನೆ ಮಾಡಿದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 18ರಂದು ಸಭೆ ಕರೆದಿದ್ದಾರೆ. ನಾನು ಮತ್ತು ಸಮಾಜದ 11 ವಕೀಲರ ನಿಯೋಗ ಸಿಎಂ ಭೇಟಿಗೆ ತೆರಳಲಿದ್ದೇವೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ಆಶಾಭಾವನೆ ನಮ್ಮಲಿದೆ ಎಂದರು.
ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ
ಲಿಂಗಾಯತ ಸಮಾಜದ ಎಲ್ಲ ಶಾಸಕರು ಸಭೆಗೆ ಬರಬೇಕು ಎಂದು ಸ್ವಾಮೀಜಿ ಆಹ್ವಾನ ಕೊಟ್ಟಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಬೇಡಿಕೆ ಈಡೇರಿಸಲು ಸರಿಯಾಗಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೇ ಅನಿವಾರ್ಯವಾಗಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಈಗಲೇ ಎಚ್ಚರಿಕೆ ಕೊಟ್ಟಿದ್ದಾರೆ.
ನಮ್ಮ ಹೋರಾಟ ಅನೇಕ ಕಡೆಗಳಲ್ಲಿ ಶಕ್ತಿ ಪ್ರದರ್ಶನ ಮಾಡಲಾಗಿದೆ. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಈಗಾಗಲೇ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಈ ಬಾರಿಯು ಸರ್ಕಾರ ಸ್ಪಂದಿಸದೇ ಹೋದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ರೂಪ ರೇಷೆ ಸಿದ್ಧಪಡಿಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.












Click it and Unblock the Notifications