ಯಶವಂತಪುರ- ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿಯೇ ಹೆರಿಗೆ
ಹುಬ್ಬಳ್ಳಿ, ಮಾರ್ಚ್ 4: ದೈವಂ ಮಾನುಷ ರೂಪೇಣ ಎಂಬ ಮಾತೊಂದಿದೆ. ಅಂದರೆ ಆ ದೇವರು ಮನುಷ್ಯ ರೂಪದಲ್ಲಿ ಬಂದು, ಸಹಾಯ ಮಾಡುತ್ತಾನೆ ಎಂದರ್ಥ. ಈ ಘಟನೆಯನ್ನು ಓದಿದ ಮೇಲೆ ಈ ಮಾತು ಅದೆಷ್ಟು ಸರಿಯಾಗಿ ಒಪ್ಪುತ್ತದೆ ಅಂತ ನೀವೇ ಹೇಳಿ.
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಬ್ಬರು ಸ್ಟಾಫ್ ನರ್ಸ್ ಗಳು ವೈದ್ಯಕೀಯ ಪರಿಕರಗಳ ಸಹಾಯ ಇಲ್ಲದೆ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ. ಇಷ್ಟೇ ಹೇಳಿದರೆ ಓಹ್, ಅದರಲ್ಲೇನು ಹೆಚ್ಚುಗಾರಿಕೆ ಎನಿಸಬಹುದು. ಆದರೆ ಹೆರಿಗೆ ಮಾಡಿಸಿರುವುದು ಯಶವಂತಪುರ- ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ. ಆ ಮೂಲಕ ತಾಯಿ ಹಾಗೂ ಹೆಣ್ಣು ಮಗುವಿನ ಜೀವ ಕಾಪಾಡಿದ್ದಾರೆ.
ನರ್ಸಿಂಗ್ ನಲ್ಲಿ ಬಿಎಸ್ ಸಿ ಪೂರೈಸಿರುವ ಶಶಿಕಲಾ ಹಾಗೂ ವೀಣಾ ರೈಲಿನಲ್ಲಿ ಬೀದರ್ ಗೆ ತೆರಳುತ್ತಿದ್ದಾಗ ಜನರಲ್ ಬೋಗಿಯಲ್ಲಿದ್ದ ಮಾನಮ್ಮ ಎಂಬಾಕೆ ಹೆರಿಗೆ ನೋವಿನಿಂದ ಕಷ್ಟಪಡುತ್ತಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿಗೆ ಧಾವಿಸಿ ಪರೀಕ್ಷೆ ನಡೆಸಿದಾಗ ಮಗು ಹೊರಗೆ ಬರುತ್ತಿರುವ ಸೂಚನೆ ಸಿಕ್ಕಿದೆ.

ಆ ನಂತರ ರೈಲಿನ ಬಾಗಿಲು ಮತ್ತು ಶೌಚಾಲಯದ ನಡುವಿನ ಪ್ರದೇಶವನ್ನು ಆಪರೇಷನ್ ಥಿಯೇಟರ್ ನಂತೆ ಮಾಡಿಕೊಂಡು, ಪ್ರಯಾಣಿಕರ ಬೇಡ್ ಶೀಟ್ ನಿಂದ ಆ ಪ್ರದೇಶವನ್ನು ಮುಚ್ಚಿ, ಅಗತ್ಯವಿದ್ದ ಚಾಕು ಮತ್ತಿತರ ವಸ್ತುಗಳನ್ನು ಬೇರೆ ಪ್ರಯಾಣಿಕರಿಂದ ಪಡೆದು, ಹೆರಿಗೆ ಮಾಡಿಸಿದ್ದಾರೆ.
ಹದಿನೈದರಿಂದ ಇಪ್ಪತ್ತು ನಿಮಿಷದಲ್ಲಿ ಹೆರಿಗೆ ಮುಗಿಯಿತು. ಹೆಣ್ಣುಮಗು ಜನನವಾಯಿತು ಎಂದು ನರ್ಸ್ ಶಶಿಕಲಾ ಹೇಳಿದ್ದಾರೆ. ಮಾನಮ್ಮ ಅವರಿಗೆ ಇದು ಚೊಚ್ಚಲ ಹೆರಿಗೆ. ಆದರೂ ಮುಂಜಾಗ್ರತೆ ವಹಿಸಿರಲಿಲ್ಲ. ನಮಗೂ ಸ್ವಲ್ಪ ಭಯ ಇತ್ತು. ಆದರೆ ನಮ್ಮಗೆ ಬೇರೆ ದಾರಿ ಇರಲಿಲ್ಲ. ವಿಳಂಬವಾಗಿದ್ದರೆ ತಾಯಿ ಹಾಗೂ ಮಗು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂದಿದ್ದಾರೆ.
ಇದಕ್ಕೂ ಮುನ್ನ ಹಲವಾರು ಹೆರಿಗೆಗಳನ್ನು ಮಾಡಿಸಿದ್ದೇವೆ. ಆದರೆ. ಈ ಬಾರಿ ಯಾವುದೇ ವೈದ್ಯಕೀಯ ಸಲಕರಣೆ ಇಲ್ಲದೆ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ್ದೇವೆ ವೀಣಾ ಹೇಳಿದ್ದಾರೆ. ಈ ಇಬ್ಬರು ನರ್ಸ್ ಗಳ ಬಗ್ಗೆ ಹೆಮ್ಮೆ ಇದೆ. ಅವರನ್ನು ಸನ್ಮಾನಿಸಲಾಗುವುದು ಎಂದು ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.












Click it and Unblock the Notifications