Breaking; ಹುಬ್ಬಳ್ಳಿ ಗಲಭೆ, ಪಿಯು ಪರೀಕ್ಷೆ ಬಳಿಕ ಜೈಲಿಗೆ ಆರೋಪಿ
ಹುಬ್ಬಳ್ಳಿ, ಏಪ್ರಿಲ್ 22; ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿ ಅಭಿಷೇಕ್ ಹಿರೇಮಠ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಜೈಲಿಗೆ ವಾಪಸ್ ಆಗಿದ್ದಾನೆ. ಆರೋಪಿ ಪೊಲೀಸರ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕೋರ್ಟ್ ಅವಕಾಶ ನೀಡಿದೆ.
ಶುಕ್ರವಾರ ಪೊಲೀಸರು ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಪರೀಕ್ಷೆಗಾಗಿ ಹುಬ್ಬಳ್ಳಿಯ ಡಾ. ಆರ್. ಬಿ. ಪಾಟೀಲ್ ಮಹೇಶ್ ಪಿಯು ಕಾಲೇಜಿಗೆ ಕರೆತಂದಿದ್ದರು. ಪರೀಕ್ಷೆಯ ಬಳಿಕ ಜೈಲಿಗೆ ಬಿಟ್ಟು ಬಂದಿದ್ದಾರೆ.
ಅಭಿಷೇಕ್ ಹಿರೇಮಠ ಪರ ವಕೀಲರು ಹುಬ್ಬಳ್ಳಿ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಒಪ್ಪಿಗೆ ನೀಡಿತ್ತು.

ಸೋಮವಾರ ಅಭಿಷೇಕ್ ಹಿರೇಮಠನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.
ಅಭಿಷೇಕ್ ಹಿರೇಮಠ ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ಎಡಿಟ್ ಮಾಡಿದ ಫೋಟೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಈ ಪೋಟೋ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸುವಂತೆ ಒಂದು ಸಮುದಾಯದ ಜನರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಒತ್ತಾಯಿಸುತ್ತಿದ್ದರು.
ಆಗ ಪೊಲೀಸರು, ಜನರ ನಡುವೆ ವಾಗ್ವಾದ ನಡೆದು ಗಲಭೆ ಉಂಟಾಗಿತ್ತು. ಪೊಲೀಸರ ಮೇಲೆ, ಆಸ್ಪತ್ರೆ, ಆಂಜನೇಯ ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಬಳಿಕ ಪೊಲೀಸರು ಅಭಿಷೇಕ್ ಹಿರೇಮಠ ಬಂಧಿಸಿದ್ದರು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ಬಳಿ ನಡೆದ ಗಲಭೆಯಲ್ಲಿ 12 ಪೊಲೀಸರು ಗಾಯಗೊಂಡಿದ್ದರು. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 134 ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications