ಮಸೀದಿ, ಅಂಗನವಾಡಿಗಳ ಮೇಲೆ ಕಲ್ಲು ತೂರಾಟ: ಬೂದಿ ಮುಚ್ಚಿದ ಕೆಂಡದಂತಾದ ರಟ್ಟಿಹಳ್ಳಿ ಪಟ್ಟಣ
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಮಂಗಳವಾರ ಸಾರ್ವಜನಿಕರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ರಟ್ಟಿಹಳ್ಳಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಹಾವೇರಿ, ಮಾರ್ಚ್ 14: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಮಂಗಳವಾರ ಸಾರ್ವಜನಿಕರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ರಟ್ಟಿಹಳ್ಳಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ನೂರಾರು ಹಿಂದೂ ಕಾರ್ಯಕರ್ತರು ನಡೆಸುತ್ತಿದ್ದ ಶೋಭಾ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡಿದ್ದಾರೆ.
ಒಂದು ವಾರಗಳ ಹಿಂದೆ ರಟ್ಟಿಹಟ್ಟಿ ಪಟ್ಟದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲೂ ತೂರಾಟ ನಡೆದಿತ್ತು ಎನ್ನಲಾಗಿದೆ. ಈ ಹಿನ್ನಲೆ ಮಂಗಳವಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಲ್ಲೂ ತೂರಾಟ ಖಂಡಿಸಿ ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ನೂರಾರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿದ್ದು, ಮೆರವಣಿಗೆ ರಟ್ಟಿಹಳ್ಳಿ ಪಟ್ಟಣದ ಕಾರಂಜಿ ಸರ್ಕಲ್ ಬಳಿ ಬರುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ.

ರಾಯಣ್ಣ ಪುತ್ಥಳಿ ಮೆರವಣಿಗೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಲಾಟೆ ಆರಂಭವಾಗಿದ್ದು, ದುಷ್ಕರ್ಮಿಗಳು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳು ಮಸೀದಿ, ಅಂಗನವಾಡಿ ಸೇರಿದಂತೆ ಹಲವು ಅನ್ಯಕೋಮಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ರ್ಯಾಲಿ ವೇಳೆ ಸಿಕ್ಕ ವಾಹನಗಳ ಮೇಲೂ ಕಲ್ಲು ಎಸೆದಿದ್ದು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸಿದ್ದಾರೆ.
ಘಟನೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಗಾಯಗೊಂಡಿದ್ದು, ಕಾರು, ಆಟೋ ಹಾಗೂ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಗುಂಪುಗಳನ್ನು ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ರಟ್ಟಿಹಳ್ಳಿ ಪಟ್ಟಣದ ಕಾರಂಜಿ ಸರ್ಕಲ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಪೊಲೀಸ್ ಬಿಗಿಬಂದೋ ಬಸ್ತ್ ಮಾಡಲಾಗಿದೆ.
ರಟ್ಟಿಹಳ್ಳಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗಲಭೆ ನಡೆಸಲೆಂದೇ ದುಷ್ಕರ್ಮಿಗಳು ಬೇರೆ ಭಾಗದಿಂದ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ರಾಯಣ್ಣ ಪ್ರತಿಮೆ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮಾರ್ಚ್ 9ರಂದು ನಡೆದಿದ್ದ ಕಲ್ಲು ತೂರಾಟಕ್ಕೆ ಪ್ರತಿಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಲಭೆ ಆರಂಭಿಸಿದ ದುಷ್ಕರ್ಮಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ.

ಸಚಿವ ಬಿ.ಸಿ ಪಾಟೀಲ್ ಹಾಗೂ ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದು ಮಹಿಳೆಯರು, ಮಕ್ಕಳು ಗಾಯಗೊಂಡಿರುವ ಕಾರಣ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಸದ್ಯ ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿಬಂದೋ ಬಸ್ತ್ ಮಾಡಲಾಗಿದೆ.












Click it and Unblock the Notifications