Vande Bharat: ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಆದೇಶ: ಜನತೆಗೆ ಬೊಮ್ಮಾಯಿ ಮನವಿ
ಹಾವೇರಿ ಏಪ್ರಿಲ್ 2: ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಹಾವೇರಿಯಲ್ಲಿ ನಿಲುಗಡೆ ಮಾಡಲು ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಹಾವೇರಿ ಜನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಇದಕ್ಕಾಗಿ ಮಾಜಿ ಸಿಎಂ ಹಾಗೂ ಹಾವೇರಿಯ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಬೆಂಗಳೂರು ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು 2023ರ ಜೂನ್ 28 ರಿಂದ ಸಂಚಾರ ಆರಂಭಿಸಿದೆ. ಐಷಾರಾಮಿ ಸೌಲಭ್ಯಗಳ ಜತೆಗೆ ವೇಗವಾಗಿ ಸಂಚರಿಸುವ ಈ ರೈಲಿನಲ್ಲಿ ಪ್ರಯಾಣಿಸಲು ವ್ಯಾಪಕ ಬೇಡಿಕೆ ಇತ್ತು. ಆದರೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತಿ ಪಡೆದಿರುವ ಹಾವೇರಿಯಲ್ಲಿ ವಂದೇ ಭಾರತ್‌ಗೆ ನಿಲುಗಡೆ ಇರಲಿಲ್ಲ. ಇದರಿಂದ ಇಲ್ಲಿನ ಉದ್ಯಮಿಗಳು, ವ್ಯಾಪಾರಸ್ಥರು, ಪ್ರವಾಸಿಗರು ನಿರಾಸೆ ಅನುಭವಿಸುವಂತಾಗಿತ್ತು. ಜೊತೆಗೆ ಹಾವೇರಿಯಲ್ಲೂ ವಂದೇ ಭಾರತ್ ರೈಲು ನಿಲುಗಡೆಗೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
'ಭಾರತ ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ವಿಶೇಷವಾಗಿ ರೈಲ್ವೆ ಸಂಕರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಭಾರತ ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಲೈನ್ ಆಗಿರುವುದ ಕಳೆದ ಹತ್ತು ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳ ಅಭಿವೃದ್ದಿಗೆ ಕಳೆದ ವರ್ಷ 7 ಸಾವಿರ ಕೋಟಿ ರೂ. ಹಾಗೂ ಈ ವರ್ಷ 7 ಸಾವಿರ ಕೋಟಿ ರೂ. ಅನುದಾನ ನೀಡಿದೆ. ವಿಶೇಷವಾಗಿ ರೈಲ್ವೆ ಲೈನುಗಳ ವಿದ್ಯುದೀಕರಣ ಆಗಿದೆ. ಇದರ ಪರಿಣಾಮ ಅತಿವೇಗವಾಗಿ ಹೋಗುವ ವಂದೇ ಭಾರತ ರೈಲು ಕರ್ನಾಟಕದಲ್ಲಿ ಆರಂಭವಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ದೊರ ದೃಷ್ಟಿ ಕಾರಣ' ಎಂದು ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿರುವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

'ಬೆಂಗಳೂರ ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಕೇವಲ ಐದು ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡಕ್ಕೆ ಬರುತ್ತದೆ. ಇದು ಕೇವಲ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡದಲ್ಲಿ ನಿಲ್ಲುಗಡೆ ಮಾಡಲಾಗುತ್ತಿತ್ತು. ಈ ರೈಲು ಹಾವೇರಿಯಲ್ಲಿಯೂ ನಿಲುಗಡೆಯಾಗಬೇಕೆಂದು ಹಾವೇರಿ ಜಿಲ್ಲೆಯ ಜನರ ಒತ್ತಾಸೆಯಾಗಿತ್ತು. ಹಾವೇರಿ ಸಿರ್ಸಿ, ಕಾರವಾರ ಕಡಲು ಕರ್ನಾಟಕ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕ ಕೇಂದ್ರವಾಗಿದೆ. ಹೀಗಾಗಿ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆ ಆಗಬೇಕೆಂದು ಹಾವೇರಿ ಮಹಾಜನತೆ, ಚೇಂಬರ್ ಆಫ್ ಕಾಮರ್ಸ್ ಬೇಡಿಕೆ ಇತ್ತು. ಜಿಲ್ಲೆಯ ಜನರ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮೇಲೆ ಒತ್ತಡ ಹೇರಿ ಹಾಗೂ ನಮ್ಮ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೊಮಣ್ಣ ಅವರಿಗೆ ಮನವಿ ಮಾಡಿದ್ದೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಆದೇಶ ನೀಡಿದ್ದಾರೆ. ಸದ್ಯ ಇದು ಟ್ರಾಯಲ್ ಬೇಸಿಸ್ ಆಗಿದೆ' ಎಂದರು.
'ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೆ ಕಾಯಂ ಮಾಡುತ್ತಾರೆ. ಈ ರೈಲು ನಿಲುಗಡೆಯ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡುತ್ತಾರೆ. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗಿಸುವಲ್ಲಿ ಯಶಸ್ಸಿಯಾದ ಹಾವೇರಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾವೇರಿಯ ಜನತೆ ವಂದೇ ಭಾರತ ರೈಲನ್ನು ಹೆಚ್ಚು ಹೆಚ್ಷು ಬಳಕೆ ಮಾಡಿಕೊಳ್ಳಬೇಕು' ಎಂದು ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ಹಾವೇರಿ ನಿಲುಗಡೆಯಿಂದ ಉಪಯೋಗವೇನು?
ಏಲಕ್ಕಿ ಹಾರ, ಬ್ಯಾಡಗಿ ಮೆಣಸಿನಕಾಯಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಹಾವೇರಿ ಜಿಲ್ಲೆ ಸೌಲಭ್ಯಗಳ ವಿಷಯದಲ್ಲಿ ಮಾತ್ರ ಅತ್ಯಂತ ಹಿಂದುಳಿದಿದೆ. ಜಿಲ್ಲೆ ಅಭಿವೃದ್ಧಿ ಸಾಧಿಸಲು ವಂದೇ ಭಾರತ್‌ನಂತಹ ರೈಲಿನ ಸೌಲಭ್ಯ ಹಾವೇರಿಗೆ ಅಗತ್ಯವಿದೆ ಎಂದು ಜಿಲ್ಲೆಯ ಜನರು ಪ್ರತಿಪಾದಿಸಿದ್ದರು.
ಹಾವೇರಿ ಜಿಲ್ಲೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿದೆ. ಹಾಗಾಗಿ ಅಂತಾರಾಷ್ಟ್ರೀಯ ವ್ಯಾಪಾರೋದ್ಯಮಿಗಳು ಜಿಲ್ಲೆಗೆ ಆಗಮಿಸುತ್ತಾರೆ. ಹಾವೇರಿ ಮತ್ತು ರಾಣೇಬೆನ್ನೂರು ನಗರಗಳು ಬೆಂಗಳೂರು-ಪುಣೆ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಯಲ್ಲಿವೆ. ಹಾವೇರಿಯಲ್ಲಿ ನೂರಾರು ಸಣ್ಣ-ಮಧ್ಯಮ ಕೈಗಾರಿಕೆಗಳಿವೆ. ಕೈಗಾರಿಕೋದ್ಯಮಿಗಳು ತುರ್ತಾಗಿ ಬೆಂಗಳೂರಿಗೆ ತೆರಳಲು ಹುಬ್ಬಳ್ಳಿಯಿಂದ ವಿಮಾನವೇರಬೇಕು, ಅಥವಾ ಖಾಸಗಿ ವಾಹನದ ಮೊರೆ ಹೋಗಬೇಕು. ಜಿಲ್ಲೆಯ ಕಾಗಿನೆಲೆ ಕನಕದಾಸರ ಕರ್ಮಭೂಮಿ, ಶಿಗ್ಗಾವಿ ತಾಲೂಕಿನ ಶಿಶುವಿನಹಾಳ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳಿಗೆ ದೇಶದ ಮೂಲೆಗಳಿಂದಲೂ ಪ್ರವಾಸಿಗರು, ಭಕ್ತರು ಬರುತ್ತಾರೆ.
ಇನ್ನು ಹಾವೇರಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆಯಾಗಿದ್ದು ಹೊರ ರಾಜ್ಯಗಳ ವಿದ್ಯಾರ್ಥಿಗಳೂ ಸಾಕಷ್ಟಿದ್ದಾರೆ. ಇದೆಲ್ಲದರ ದೃಷ್ಟಿಯಿಂದ ವಂದೇ ಭಾರತ್ ರೈಲು ಹಾವೇರಿ ನಿಲುಗಡೆಯಿಂದ ಸಹಾಯವಾಗಲಿದೆ. ಸದ್ಯ ವಂದೇ ಭಾರತ್ ರೈಲು ಪ್ರತಿ ದಿನ ಬೆಳಗ್ಗೆ 5.35ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಧಾರವಾಡ ತಲುಪುತ್ತದೆ. ಮರಳಿ ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ಸಂಜೆ 7.45ಕ್ಕೆ ಬೆಂಗಳೂರಿಗೆ ತಲುಪುತ್ತದೆ.
ಈ ರೈಲಿಗೆ ತುಮಕೂರು, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಿಲುಗಡೆಯಿದೆ. ಆದರೆ ರೈಲು ಪ್ರಾರಂಭಗೊಂಡು 1 ವರ್ಷ ಕಳೆದರೂ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಿಲ್ಲ. ವಾರಾಂತ್ಯದಲ್ಲಿಮಾತ್ರ ಪ್ರಯಾಣಿಕರ ಸಂಖ್ಯೆ ಶೇ.80ಕ್ಕಿಂತ ಹೆಚ್ಚಾಗುತ್ತದೆ. ಉಳಿದ ದಿನಗಳಲ್ಲಿ ಶೇ.50-60ರಷ್ಟು ಸೀಟ್‌ಗಳು ಮಾತ್ರ ಭರ್ತಿಯಾಗುತ್ತವೆ. ಹಾವೇರಿಯಲ್ಲಿ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ರೈಲ್ವೆ ಇಲಾಖೆಯ ಆದಾಯವೂ ಹೆಚ್ಚಳವಾಗಲಿದೆ.












Click it and Unblock the Notifications