ಹಾವೇರಿ; ಇನ್ನೇನು ಶವ ಹೂಳಬೇಕೆನ್ನುವಷ್ಟರಲ್ಲಿ ತಡೆದು ಗಂಟಲ ದ್ರವ ಸಂಗ್ರಹಿಸಿದ ಸಿಬ್ಬಂದಿ
ಹಾವೇರಿ, ಮೇ11: ಹಾವೇರಿಯ ಸವಣೂರಿನಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಂದು ಅವರ ಅಂತ್ಯಕ್ರಿಯೆಗೆ ಎಲ್ಲಾ ಏರ್ಪಾಟನ್ನು ಮಾಡಲಾಗಿತ್ತು. ಇನ್ನೇನು ಅವರ ಶವವನ್ನು ಮಣ್ಣಿನಲ್ಲಿ ಮುಚ್ಚಬೇಕು ಎನ್ನುವಷ್ಟರಲ್ಲಿ, ಸ್ಥಳಕ್ಕೆ ಬಂದ ಲ್ಯಾಬ್ ಟೆಕ್ನೀಷಿಯನ್ ಅದನ್ನು ತಡೆದು, ಸತ್ತ ಆ ವ್ಯಕ್ತಿಯ ಗಂಟಲ ದ್ರವವನ್ನು ಪರೀಕ್ಷೆಗೆಂದು ಸಂಗ್ರಹಿಸಿದ್ದಾರೆ.
Recommended Video
ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಹಿರೆಮುಗದೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ವಯೋಸಹಜ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇಂದು ಶವವನ್ನು ಹೂಳಲು ಕುಟುಂಬದವರು ಸಿದ್ಧತೆ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಲ್ಯಾಬ್ ಟೆಕ್ನಿಷಿಯನ್ ಬಂದು, ಸಾವಿನ ಕುರಿತು ಕುಟುಂಬದವರಿಂದ ಮಾಹಿತಿಯನ್ನು ಸಂಗ್ರಹಿಸಿ, ಶವ ಹೂಳುವ ಗುಂಡಿಯಲ್ಲಿ ಇಳಿದು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಸವಣೂರಲ್ಲಿ ಈಗಾಗಲೇ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ ವ್ಯಕ್ತಿ ಮೃತಪಟ್ಟಿದ್ದು, ಕೊನೆ ಕ್ಷಣದಲ್ಲಿ ಹೀಗೆ ಗಂಟಲ ದ್ರವ ಸಂಗ್ರಹಿಸಿರುವುದನ್ನು ಕಂಡು ಅಲ್ಲಿನವರು ಅಲ್ಪ ಮಟ್ಟಿಗೆ ಆತಂಕಗೊಂಡಿದ್ದಾರೆ.

ಈ ಸಂಗತಿ ಜೊತೆ ಜೊತೆಗೆ, ಜಿಲ್ಲೆಯಲ್ಲಿ, ಗಂಟಲು ದ್ರವದ ಮಾದರಿ ಸಂಗ್ರಹಿಸಲು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಗಳು ಹಿಂದೇಟು ಹಾಕುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ. ಹೀಗಾಗಿ ಗುತ್ತಿಗೆ ಲ್ಯಾಬ್ ಟೆಕ್ನಿಷಿಯನ್ ಗಳಿಂದಲೇ ಆರೋಗ್ಯ ಇಲಾಖೆ ಹಗಲು ರಾತ್ರಿ ಕೆಲಸ ಮಾಡಿಸುತ್ತಿದೆ ಎಂದು ಗುತ್ತಿಗೆ ಲ್ಯಾಬ್ ಟೆಕ್ನಿಷಿಯನ್ ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ ಈ ಮೃತ ವ್ಯಕ್ತಿಯ ಗಂಟಲ ದ್ರವ ಸಂಗ್ರಹಕ್ಕೂ ಒಂಬತ್ತು ಗಂಟೆಗೆ ಆರೋಗ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರೂ, ಅಲ್ಲಿಗೆ ಹೋಗಿದ್ದು ತಡವಾಗಿರುವುದಾಗಿ ತಿಳಿದುಬಂದಿದೆ.












Click it and Unblock the Notifications