Rain Alert: ಭಾರೀ ಮಳೆ ಮನ್ಸೂಚನೆ, ಈ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
ಹಾವೇರಿ, ಮೇ 14: ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಹಾವೇರಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಗುಡುಗು ಮಿಂಚು ಸಹಿತ ಮಳೆ ಬಿದ್ದಿದೆ. ವಿವಿಧೆಡೆ ಸುರಿದ ಆಲಿಕಲ್ಲು ಮಳೆ ದಾಖಲಾಗಿದ್ದು, ಜೀವಗಳಿಗೂ ಹಾನಿಯಾಗಿದೆ. ಬಿಸಿಲಿನ ಧಗೆಗೆ ಸುಸ್ತಾಗಿದ್ದ ಈ ಜಿಲ್ಲೆಗಳ ಜನರಿಗೆ ಮಳೆರಾಯ ಮಂಗಳವಾರ ತಂಪರೆದಿದ್ದಾನೆ. ಮೊನ್ನೆಯಷ್ಟೇ ಸುರಿದ ಮಳೆಯಲ್ಲಿ ಸಿಡಿಲಿನ ಹೊಡೆತಕ್ಕೆ ಮೂವರು ಮೃತಪಟ್ಟಿದ್ದರು. ನೆನ್ನೆ ಮತ್ತೆ ಜೋರು ಮಳೆ ಆಗಿದೆ.
ಉತ್ತರ ಒಳನಾಡಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಾಳಿಯ ವೇಗ ಹೆಚ್ಚಾಗಿದೆ. ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಈ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಹಾವೇರಿ, ಧಾರವಾಡ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ಜೋರಾಗಿದ್ದು, ಇಂದು ಬುಧವಾರ ಭಾರೀ ಉಷ್ಣ ಅಲೆ ಕಂಡು ಬಂದಿದೆ. ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಇವೆರಡು ಜಿಲ್ಲೆಗಳು ಸೇರಿದಂತೆ ಉತ್ತರ ಒಳನಾಡು ಜಿಲ್ಲೆಗಳಾದ್ಯಂತ ಸಂಜೆವರೆಗೆ ಸೆಕೆ ಉಂಟಾಗಿದೆ. ಸಂಜೆ ನಂತರ ಜೋರು ಮಳೆ ಆಗಲಿದೆ.
ಮಳೆಯಲ್ಲಿ ಮೃತರಾದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿ ಡಮ್ಮನಹಳ್ಳಿ ನಾಗಪ್ಪ ಬಸವಣ್ಣೆಪ್ಪ ಕಣಸೋಗಿ (65), ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಸುನೀಲ್ ಕಾಳೇರ (29) ಮತ್ತು ಗದಗ ಜಿಲ್ಲೆಯ ಬಸಾಪುರದ ಮರಿಯವ್ವ ನಾಯ್ಕರ್ (60) ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ತ್ವರಿತವಾಗಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಾಳಿ ವೇಗದಲ್ಲಿ ಬೀಸಲಿದೆ. ಜೋರು ಮಳೆ ಆಗಲಿದೆ. ಕೆಲವೆಡೆ ತಾಪಮಾನ ಹೆಚ್ಚಾಗಿರಲಿದೆ. ಬುಧವಾರ ಕರಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
04 ದಿನ ಯೆಲ್ಲೋ ಅಲರ್ಟ್
ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನ ಭಾರೀ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೇ 19 ರವರೆಗೆ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ. ಈ ಮಳೆ ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಕಾರಣದಿಂದ ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಲಿದೆ.












Click it and Unblock the Notifications