Haveri Lok Sabha: ಗೆಲುವು-ಸೋಲಿನ ಜಾತಿ ಲೆಕ್ಕಾಚಾರದಲ್ಲಿ 'ಹಾವೇರಿ' ಈ ಭಾರಿ ಭಿನ್ನ: ವರದಿ ವಿಶ್ಲೇಷಣೆ
ಹಾವೇರಿ, ಮಾರ್ಚ್ 21: ಮಧ್ಯ ಕರ್ನಾಟಕ ಹಾವೇರಿ ಹಾಗೂ ಗದಗ ಎರಡು ಜಿಲ್ಲೆಗಳನ್ನು ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ (Haveri Lok Sabha) ಚುನಾವಣೆ ಪ್ರಚಾರ, ರಾಜಕೀಯ ಕೆಲಸಗಳು ಗರಿಗೆದರಿವೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿ ಗೆಲುವಿನ ಲೆಕ್ಕಾಚಾರಗಳು ಶುರುವಾಗಿದೆ.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಾಗೂ ಹಾವೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಘೋಷಿಸಲಾಗಿದೆ. ಇಬ್ಬರು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಇದರೊಂದಿಗೆ ಜಿಲ್ಲೆಗಳಲ್ಲಿ ಜಾತಿ ಲೆಕ್ಕಾಚಾರ, ಯಾವ ಸಮುದಾಯ ಯಾರ ಪರ, ವರ್ಚಸ್ಸು ಸೇರಿದಂತೆ ಎಲ್ಲ ಕೂಡಿ ಕಳೆವ ಲೆಕ್ಕ ಶುರುವಾಗಿದೆ.

ಅಭ್ಯಥಿರ್ಗಳ ವಿಷಯವಾಗಿ ಸಾಧಕ ಭಾದಕ ಚರ್ಚೆ ನಡೆಯುತ್ತಿದೆ. ಹಾವೇರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ ಬಂಡಾಯ ಎದ್ದಿದ್ದಾರೆ. ಶಿವಮೊಗ್ಗದಲ್ಲಿ ಪಕ್ಷೇತರ ಸ್ಪರ್ಧೆಗೆ ಅಣಿಯಾಗಿದ್ದರಿಂದ ಕ್ಷೇತ್ರದಲ್ಲಿ ಕುರುಬ ಮತದಾರರ ನಡೆ ಗೌಪ್ಯವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ವೀರಶೈವ ಲಿಂಗಾಯತರಿಗೆ ಮಣೆ ಹಾಕಿರುವುದರಿಂದ 2019ರ ಕ್ಕಿಂತ ಈ ಬಾರಿ ಕ್ಷೇತ್ರವು ತುಸು ಭಿನ್ನವಾಗಿ ಕಾಣಿಸುತ್ತಿದೆ.
ಕ್ಷೇತ್ರದಲ್ಲಿ ಮತಯಾಚನೆ, ಅಬ್ಬರ ಪ್ರಚಾರ
ಗ್ಯಾರೆಂಟಿ ಸಮಾವೇಶ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಬಿಜೆಪಿ ಪಕ್ಷ ಚುನಾವಣಾ ಪ್ರಚಾರಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಸಮುದಾಯ ಮುಖಂಡರನ್ನು, ಮಠಾಧೀಶರನ್ನು ತೆರೆಮರೆಯಲ್ಲಿ ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು ಮತ ಕೇಳುತ್ತಿದ್ದಾರೆ. ಮೊದಲ ಹಂತದಲ್ಲಿ ಕಾರ್ಯಕರ್ತರನ್ನು ಭರವಸೆಗೆ ತೆಗೆದುಕೊಳ್ಳಲು ಕಾರ್ಯಕರ್ತರ ಸಮಾವೇಶ ಕೈಗೊಳ್ಳುವ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಅಧಿಕೃತ ಮುಂದಡಿ ಇಟ್ಟಿದ್ದಾರೆ.
ಅಭ್ಯರ್ಥಿಗಳು ಹೆಸರು ಘೋಷಣೆ ನಂತರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಾವಣೆ ಕುರಿತು ಕೆಲವು ವದಂತಿಗಳು ಕೇಳಿ ಬರುತ್ತಿರುವೆ. ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಆಗುತ್ತಿದ್ದಂತೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ರೆಕ್ಕೆಪುಕ್ಕ ಬಂದಿವೆ.
ಟಿಕೆಟ್ ಹಂಚಿಕೆಯ ವದಂತಿ
ಇನ್ನು ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಿ ಈಶ್ವರಪ್ಪ ಪುತ್ರ ಕಾಂತೇಶಗೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಮಾತು ಸಹ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇತ್ತ ಪ್ರಚಾರದಲ್ಲಿ ನಿರತರಾಗಿರುವ ಬಸವರಾಜ ಬೊಮ್ಮಾಯಿ ಅವರು ತಾವು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ವರಿಷ್ಠರ ತೀರ್ಮಾನ ಪಾಲಿಸಬೇಕು ಎಂದು ತಿಳಿಸಿದ್ದರು.
ಜಾತಿ ಲೆಕ್ಕಾಚಾರದಲ್ಲೂ ಬದಲಾವಣೆ
ಕಳೆದ ಮೂರು ಚುನಾವಣೆಯಲ್ಲಿ ಲಿಂಗಾಯತೇತರ ಅಭ್ಯರ್ಥಿಗೆ ಟಿಕೆಟ್ ನೀಡಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಲಿಂಗಾಯತರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಗೆ ಠಕ್ಕರ್ ಕೊಡಲು ಮುಂದಾಗಿದೆ. ಈ ಹಿನ್ನೆಲೆ ಬಿಜೆಪಿಯೂ ಲಿಂಗಾಯತರಿಗೇ ಟಿಕೆಟ್ ನಿಡುವ ಅನಿವಾರ್ಯತೆ ಸೃಷ್ಟಿ ಆಗಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಲಿಂಗಾಯತೇರರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿಯಲ್ಲಿ ಕೆಇ ಕಾಂತೇಶ್ ಅವರಿಗೆ ಬಹುಶಃ ಟಿಕೆಟ್ ಸಿಕ್ಕಿರುತ್ತಿತ್ತು. ಲಿಂಗಾಯತರ ಮೇಲೆ ಬಿಎಸ್‌ವೈ ಪ್ರಭಾವ ಇರುವುದರಿಂದ, ಕಾಂಗ್ರೆಸ್ ಅಭ್ಯರ್ಥಿ ಲಿಂಗಾಯತರಾದರೂ ಬಿಜೆಪಿಗೆ ನಷ್ಟವಿಲ್ಲ ಎಂಬ ಲೆಕ್ಕಾಚಾರ ಹೊಂದಿರುವ ಬಿಜೆಪಿ ಪಕ್ಷವು ಆತ್ಮತೃಪ್ತಿಯಲ್ಲಿದೆ.
ತೆರೆಮರೆಯಲ್ಲಿ ಕಸರತ್ತು
ಹಾವೇರಿ ಟಿಕೆಟ್ ಕೈತಪ್ಪಿ ಶಿವಮೊಗ್ಗದಲ್ಲಿ ಬಂಡಾಯ ಬಂಡಿ ಹೂಡಿರುವ ಕಾಂತೇಶ್ ನಡೆಯಿಂದ ಕ್ಷೇತ್ರದಲ್ಲಿ ಕುರುಬ ಮತಗಳ ನಡೆ ಎತ್ತಕಡೆ ಎಂಬ ಸುದ್ದಿ ಪಕ್ಷದೊಳಗಿನ ಪ್ರಶ್ನೆ ಪ್ರಶ್ನೆಯಾಗಿ ಉಳಿದಿದೆ. ವಿಧಾನಸಭೆಗೂ, ಲೋಕಸಭೆಗೂ ಚುನಾವಣೆ ಭಿನ್ನತೆ ಇರುವುದರಿಂದ ಕುರುಬ ಮತಗಳು ಬಿಜೆಪಿಗೂ ಬೀಳುತ್ತವೆ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ.

ಆದರೆ, ಕುರುಬ ಸಮುದಾಯದ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ತನ್ನದೇ ವ್ಯೂಹಾತ್ಮಕ, ಚಕ್ರವ್ಯೂಹ ರಚಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಕುರುಬ ಮುಖಂಡರ ಜತೆ ಒಳಗೊಳಗೆ ಮುಖಾಮುಖಿ ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆ ಕುರುಬರ ನಡೆ ಗೌಪ್ಯವಾಗಿದೆ.
ಆಯಾ ಪಕ್ಷಗಳಿಗೆ ಆಯಾ ಕೆಲ ಜಾತಿಗಳ ಬೆಂಬಲ
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ನಂತರ ಕ್ಷೇತ್ರದಲ್ಲಿ ಒಂದಿಷ್ಟು ಸ್ಪಷ್ಟ ಚಿತ್ರಣ ಹೊರಬೀಳುತ್ತಿದೆ. ಅಹಿಂದ, ಲಿಂಗಾಯತ ಮತಬ್ಯಾಂಕ್ ನಮ್ಮೊಟ್ಟಿಗೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಾರ್ಯಕರ್ತರು ಬೆನ್ನು ತಟ್ಟಿಕೊಳ್ಳುತ್ತಿದ್ದರೆ, ವೀರಶೈವ ಲಿಂಗಾಯತ, ಹಿಂದೂಳಿದ ಮತ್ತು ದಲಿತ, ಬಲಗೈ ಮತಗಳು ನಮ್ಮೊಟ್ಟಿಗಿವೆ ಎಂದು ಬಿಜಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ.
ಕ್ಷೇತ್ರದಲ್ಲಿ ಅಹಿಂದ, ಲಿಂಗಾಯತ ಮತಬ್ಯಾಂಕ್ ನಮ್ಮೊಟ್ಟಿಗಿದೆ ಎಂದು ಕಾಂಗ್ರೆಸ್ ಬೆನ್ನತಟ್ಟಿಕೊಳ್ಳುತ್ತಿದೆ. ವೀರಶೈವ ಲಿಂಗಾಯತ, ಹಿಂದೂಳಿದ ಮತ್ತು ದಲಿತ, ಬಲಗೈ ಮತಗಳು ನಮ್ಮೊಟ್ಟಿಗಿವೆ ಎಂದು ಬಿಜೆಪಿ ಅಭ್ಯರ್ಥಿಗಳು ಸಮಾಧಾನ ಪಟ್ಟುಕೊಳ್ಳುತ್ತಿವೆ. ಪ್ರಚಾರದ ಸಂದರ್ಭದಲ್ಲಿ ಜಾತಿ ಗಣತಿ ಲೆಕ್ಕಕ್ಕೆ ಸಿಕ್ಕರೂ, ಮತ ಗಣತಿ ಲೆಕ್ಕಕ್ಕೆ ಸಿಗಲಾರದಷ್ಟು ಈ ಬಾರಿ ಮತಬ್ಯಾಂಕ್ ವಿಭಿನ್ನ ಸ್ವರೂಪ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
ಸಣ್ಣ ಸಮುದಾಯ, ಜಾತಿಗಳು ಗೆಲುವಿಗೆ ಅತಿ ಮುಖ್ಯ
ಚುನಾವಣೆಯಲ್ಲಿ ವೀರಶೈವ ಲಿಂಗಾಯತ, ಕುರುಬ, ಮುಸ್ಲಿಂ ಮತ್ತು ದಲಿತ ಸಮುದಾಯದ ಸಂಪ್ರದಾಯಿಕ ಮತಗಳನ್ನು ಸೆಳೆಯುವುದು ಸುಲಭವಾದರೆ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನೆರವಾಗುವ ಸಣ್ಣ ಸಣ್ಣ ಸಮುದಾಯ ಮತಗಳನ್ನು ಪಡೆಯುವುದು ಅತೀ ಅವಶ್ಯಕವಾಗಿದೆ.
5 ರಿಂದ 30 ಸಾವಿರ ಒಳಗೆ ಮತಬ್ಯಾಂಕ್ ಹೊಂದಿರುವ ಮರಾಠ, ದೇವಾಂಗ, ಕುರುಹಿನಶೆಟ್ಟಿ, ಬ್ರಾಹ್ಮಣ, ವೇಮನ ರೆಡ್ಡಿ ಸೇರಿದಂತೆ ಇತರೆ ಸಮುದಾಯಗಳ ಮತ ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಅಗತ್ಯವಾಗಿರುತ್ತದೆ.
ಜಾತಿ ಲೆಕ್ಕಾಚಾರದಲ್ಲಿ ಹಾವೇರಿ ಭಿನ್ನ
ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯವಾಗಿ ಸಾಕಷ್ಟು ಮಂದಿಗೆ ಆಪ್ತವಾಗಿದ್ದಾರೆ. ಕಾಂಗ್ರೆಸ್‌ನಲ್ಲೂ ಅವರಿಗೆ ಆಪ್ತಮಿತ್ರರಿದ್ದಾರೆ. ಮಾಜಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಗದಗ ಜಿಲ್ಲೆಯ ಮೂರು ಭಾರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಲಿಂಗಾಯತ ಒಳಪಂಗಂಡಗಳ ಮತಗಳು ಇವರಿಗೆ ಚುನಾವಣಾ ಕಣದಲ್ಲಿ ಅತ್ಯವಶ್ಯಕವಾಗಿವೆ. ಇದೆಲ್ಲ ಕಾರಣದಿಂದ ಹಾವೇರಿ ಈ ಬಾರಿ ಚುನಾವಣೆ ದೃಷ್ಟಿಯಿಂದ ಜಾತಿ ಲೆಕ್ಕಾಚಾರದಲ್ಲಿ ವಿಭಿನ್ನವಾಗಿ ಕಾಣುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಪ್ರಭಾವ ಕೆಲ ಪ್ರದೇಶಕ್ಕೆ ಸಿಮೀತ
ಹಾವೇರಿಗೆ ಕಾಂಗ್ರೆಸ್ ಘೋಷಿಸಿರುವ ಅಭ್ಯರ್ಥಿ ಶಾಸಕ ಜಿ.ಎಸ್. ಆನಂದಸ್ವಾಮಿ ಗಡ್ಡದೇವರಮಠ ಅವರು ಶಿರಹಟ್ಟಿ ಪಟ್ಟಣದವರಾಗಿದ್ದಾರೆ. ಇವರು ಹಾವೇರಿ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೆಶ್ವರ ಮತ್ತು ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ರಾಜಕೀಯ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಲಿಂಗಾಯತ ನಾಯಕರೆನಿಸಿಕೊಂಡಿರುವ ಎಚ್‌ಕೆ ಪಾಟೀಲ್ ಅವರನ್ನು ಕಣಕ್ಕಿಳಿಸಲಿದೆ ಎಂಬ ವದಂತಿಗಳು ರಾಜಕೀಯದಲ್ಲಿ ಶುರುವಾಗಿವೆ.












Click it and Unblock the Notifications