ಕರ್ನಾಟಕ: ಅಮೂಲ್ ಬೆನ್ನಲ್ಲೆ ಗುಜರಾತಿ ರೆಡ್‌ಚಿಲ್ಲಿ ಸರದಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಆವರಿಸುತ್ತಿರುವ ಪುಷ್ಪ
ಹಾವೇರಿ, ಏಪ್ರಿಲ್ 12: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿದ್ದಂತೆ ಬೆಂಗಳೂರು ಪ್ರವೇಶಿಸಿದ ಗುಜರಾತ್ ಮೂಲದ ಅಮುಲ್ ಹಾಲಿನ ಬ್ರ್ಯಾಂಡ್ ವಿವಾದ ಚುರುಕು ಪಡೆಯಿತು. ಇದೀಗ ಮಧ್ಯ ಕರ್ನಾಟಕದಲ್ಲಿರುವ ಏಷ್ಯಾದ ಅತೀ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆಗೆ ಗುಜರಾತ್ ಮೂಲದ 'ರೆಡ್ ಚಿಲ್ಲಿ' ವಕ್ಕರಿಸಿದೆ. ಭರ್ಜರಿ ವ್ಯಾಪಾರದ ಮೂಲಕ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕದಲ್ಲಿ ಅಮುಲ್ ಹಾಲಿನ ನಂತರ ಇದೀಗ ಗುಜರಾತ್ ಮೆಣಸಿನಕಾಯಿ ಸರದಿ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್‌ನ ಪ್ರಸ್ತಾಪವು ರಾಜಕೀಯ ಆರೋಪ ಪ್ರತ್ಯಾರೋಪ ಸಹಿತ ರಾಜಕೀಯ ಕಾವು ಪಡೆದುಕೊಂಡಿದೆ.

ಅದೇ ರೀತಿ ಗುಜರಾತ್ ಮೂಲಕ ಕೆಂಪು ಮೆಣಸಿನಕಾಯಿ 'ಪುಷ್ಪ', ಅದನ್ನು ಲಾಲಿ ಅಂತಳೂ ಅದನ್ನು ಕರೆಯುತ್ತಾರೆ. ಬೇರೆ ರಾಜ್ಯದ ಈ ರೆಡ್ ಚಿಲ್ಲಿ ಏಷ್ಯಾದ ಅತೀ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿರುವ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಸ್ಥಳೀಯ ರೈತರ ಮೆಣಸಿನಕಾಯಿ ವಹೀವಾಟು ಹಿಂದಿಕ್ಕುವಲ್ಲಿ ಯಶಸ್ವಿಯಾಗವತ್ತ ಹೆಜ್ಜೆ ಇಟ್ಟಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಕನಿಷ್ಠ 20,000 ಕ್ವಿಂಟಲ್ ಗುಜರಾತಿ ಮೆಣಸಿನಕಾಯಿ ಮಾರಾಟವಾಗಿದೆ. ಈ ಗುಜರಾತಿ ಪುಷ್ಪಾ ಮೆಣಸಿನಕಾಯಿಯು ಸ್ಥಳಿಯ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ತಳಿಗಳಿಗೆ ಪ್ರತಿಸ್ಪರ್ಧೆ ಅಲ್ಲ ಎನ್ನಲಾಗಿದೆ.
ಹೀಗಿದ್ದರೂ ಸಹ ಗುಜರಾತ್ ಮೂಲಕ ಮೆಣಸಿನಕಾಯಿ ತಳಿಯು ದೊಡ್ಡ ಮಟ್ಟದಲ್ಲಿ ಬ್ಯಾಡಗಿ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಪುಷ್ಪ-ಲಾಲಿ ಮೆಣಸಿನಕಾಯಿಗಳು ನಮ್ಮಲ್ಲಿ ಈ ಹಿಂದಿನಿಂದಲೂ ದೊರೆಯುವ ತಳಿಗಳಿಗಿಂತ ಅತ್ಯಧಿಕ ಕೆಂಪು ಬಣ್ಣದಲ್ಲಿ ಕೂಡಿದೆ. ಆದರೆ ಅದರ ಬಣ್ಣ ಹೆಚ್ಚು ಕಾಲ ಉಳಿಯದು ಎಂದು ರೈತರು, ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತಿ 'ಪುಷ್ಪ' ಕ್ಕೆ ಅಧಿಕ ಬೆಲೆ
ಗುಜರಾತಿ 'ಪುಷ್ಪ' ಮೆಣಸಿನಕಾಯಿ ಮಾರಾಟಗಾರರು ಕನಿಷ್ಠ 70 ರಷ್ಟು ಮೆಣಸಿನಕಾಯಿಯನ್ನು ಮಾರುಕಟ್ಟೆ ಸುತ್ತಮುತ್ತಲು ಹತ್ತಿರದಲ್ಲೇ ಶೀಘ್ರ ಲಭ್ಯತೆ ನೋಡಿಕೊಂಡು ವಿವಿಧ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಡಲಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ ಬೆಲೆ ಏರಿಕೆ ಆದಾಗ ಮಾರುಕಟ್ಟೆಗೆ ತರುವ ಸಾಧ್ಯತೆ ಇದೆ ಎಂದು ಬ್ಯಾಡಗಿ ಎಪಿಎಂಸಿಯ ಮೂಲಗಳು ತಿಳಿಸಿವೆ.
ಪುಷ್ಪ ಕೆಂಪು ಮೆಣಸಿನಕಾಯಿಗೆ ಬ್ಯಾಡಗಿಯಲ್ಲಿ ಏಕಾಏಕಿ ಬೆಲೆ ಏರಿಕೆಯ ಲಾಭ ಪಡೆದುಕೊಂಡಿದೆ. ಇತರ ಮೆಣಸಿನಕಾಯಿಗಳಿಂಗಿಂತ ಭರ್ಜರಿ ವ್ಯಾಪಾರ ವಹೀವಾಟು ನಡೆಸಿದೆ. ಆದರೆ ಬೇಡಿಕೆಯಷ್ಟು ಪುಷ್ಪ ಸಿಗದ ಕಾರಣ ಅದರ ಬೆಳೆಯು ಹೆಚ್ಚಳವಾಗಿದೆ. ಇಡಿ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಮತ್ತು ವ್ಯಾಪಾರ ಭರಾಟೆಯಲ್ಲಿ ಗುಜರಾತಿಯ ಪುಷ್ಪದ್ದೇ ಸಿಂಹಪಾಲು ಎನ್ನಲಾಗಿದೆ.
ಬ್ಯಾಡಗಿ ಖ್ಯಾತಿಗೆ ಚ್ಯುತಿ ಬರದಂತೆ ನೋಡಿಕೊಳ್ಳಿ: ರೈತ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ಸ್ಥಳಿಯ ಡಬ್ಬಿ ಹಾಗೂ ಕಡ್ಡಿ ತಳಿಗಳ ಕೆಂಪು ಮೆಣಸಿನಕಾಯಿಯು ತನ್ನದೇ ಆದ ಅಸ್ಮಿತೆಯನ್ನು ಬೆಳೆಸಿಕೊಂಡಿದೆ. ಜಾಗತಿಕವಾಗಿ ಅನೇಕ ದೇಶಗಳು ಮತ್ತು ಅಲ್ಲಿನ ಕಂಪನಿಗಳು ವರ್ಷಗಳಿಂದ ಬ್ಯಾಡಗಿ ಮೆಣಸಿನಕಾಯಿಯನ್ನು ಅವಲಂಬಿಸಿವೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬ್ಯಾಡಗಿ ಕೆಂಪು ಮೆಣಸಿನಕಾಯಿಗೆ ಪ್ರಸಿದ್ಧಿ ಪಡೆದಿದೆ. ಇವೆಲ್ಲ ಕಾರಣಗಳಿಂದ ರಾಜ್ಯ ಸರ್ಕಾರ ಸ್ಥಳೀಯ ಮೆಣಸಿನಕಾಯಿಯ ಖ್ಯಾತಿಗೆ ಹಾಗೂ ಇಲ್ಲಿನ ರೈತರಿಗೆ ಹಿತದೃಷ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ರಾಣಿಬೆನ್ನೂರು ತಾಲೂಕಿನ ರೈತರೊಬ್ಬರು ಮನವಿ ಮಾಡಿದ್ದಾರೆ.
ಪ್ರಸಕ್ತದಲ್ಲಿ ಗುಜರಾತಿ ಮೆಣಸಿನಕಾಯಿ ಪೂರೈಕೆ ಕ್ರಮೇಣ ಹೆಚ್ಚುತ್ತಿದೆ. ಇದು ನಿಧಾನವಾಗಿ ಮಾರುಕಟ್ಟೆಯನ್ನೇ ಆವರಿಸುವ ಲಕ್ಷಣ ಅಂತಲೂ ಅನ್ನಬಹುದು. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಖರೀದಿದಾರರು ರಾಷ್ಟ್ರದ ಎಲ್ಲಿಂದಲಾದರೂ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು ಎಂಬ ನಿಯಮ ಇದೆ. ಖರೀದಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದ್ದರಿಂದ ಎಪಿಎಂಸಿಗೆ ಇತರರ ಪೂರೈಕೆಗೆ ಮೇಲೆ ನಿರ್ಬಂಧ ವಿಧಿಸುವುದ ಕಷ್ಟ ಎನ್ನಲಾಗಿದೆ ಎಂದು ಬ್ಯಾಡಗಿ ಎಪಿಎಂಸಿ ಹೆಚ್ಚುವರಿ ನಿರ್ದೇಶಕ ಹಾಗೂ ಕಾರ್ಯದರ್ಶಿ ಎಚ್.ವೈ.ಸತೀಶ್ ಮಾಹಿತಿ ನೀಡಿದರು.












Click it and Unblock the Notifications