ಹಾವೇರಿ: ಕೃಷ್ಣಮೃಗ ಸಫಾರಿಗೆ ಜನರನ್ನು ಸೆಳೆಯಲು ಹಲವು ಹೊಸ ಯೋಜನೆ

ಹಾವೇರಿ, ಡಿಸೆಂಬರ್ 11: ಕರ್ನಾಟಕದ ಅರಣ್ಯ ಇಲಾಖೆ ಮಾನವ ಪ್ರಾಣಿ ಸಂಘರ್ಷ ತಪ್ಪಿಸುವ ಜೊತೆಗೆ ಕೃಷ್ಣಮೃಗ ಅಭಯಾರಣ್ಯದ ಸಫಾರಿಯನ್ನು ಉತ್ತೇಜಿಸಲು ಯೋಜನೆಯನ್ನು ರೂಪಿಸಿ, ಕಾರ್ಯವನ್ನು ಆರಂಭಿಸಿದೆ. ಮೊದಲು ಖಾಸಗಿ ವಾಹನದಲ್ಲಿ ಆರಂಭವಾಗಿದ್ದ ಸಫಾರಿಗೆ ಈಗ ಇಲಾಖೆಯಿಂದಲೇ ವಾಹನವನ್ನು ನೀಡಲಾಗಿದೆ. ಅಲ್ಲದೇ ಕೃಷ್ಣಮೃಗಗಳ ಆಹಾರವನ್ನು ಕಾಡಿನಲ್ಲಿ ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯವಿದೆ. ಕೆಲವೇ ತಿಂಗಳ ಹಿಂದೆ ಇಲ್ಲಿ ಸಫಾರಿಯನ್ನು ಆರಂಭಿಸಲಾಗಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದ್ದರಿಂದ ಸಫಾರಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆ ಯೋಜನೆಯನ್ನು ರೂಪಿಸಿದೆ.

Forest Department To Boost Blackbuck Safari At Ranebennur

ಮೊದಲ ಹಂತದಲ್ಲಿ ಕೃಷ್ಣಮೃಗ ಅಭಯಾರಣ್ಯದಲ್ಲಿ ನೀಲಗಿರಿ ಮರಗಳನ್ನು ಕಡಿದು ಹುಲ್ಲುಗಾವಲು ಹೆಚ್ಚಿಸಲಾಗುತ್ತಿದೆ. ಇದರಿಂದಾಗಿ ಸಫಾರಿಗೂ ಅನುಕೂಲವಾಗಲಿದೆ. ಅಲ್ಲದೇ ಕೃಷ್ಣಮೃಗಗಳ ಆಹಾರಕ್ಕೂ ಸಹಾಯಕವಾಗಲಿದೆ. ಕಾಡಿನಲ್ಲಿಯೇ ಆಹಾರ ಸಿಕ್ಕರೆ ಕೃಷ್ಣಮೃಗಗಳು ರೈತರ ಹೊಲಗಳಿಗೆ ನುಗ್ಗುವುದು ಕಡಿಮೆಯಾಗಲಿದ್ದು, ಮಾನವ ಪ್ರಾಣಿ ಸಂಘರ್ಷವೂ ಅಂತ್ಯವಾಗಲಿದೆ.

ಹೇಗಿದೆ ಸಫಾರಿ ಯೋಜನೆ?; ಕೃಷ್ಣಮೃಗ ಅಭಯಾರಣ್ಯದಲ್ಲಿ ಇಲಾಖೆ ಕೈಗೊಳ್ಳುವ ಯೋಜನೆಗೆ ಗ್ರಾಮಸ್ಥರು ಸಹ ಬೆಂಬಲ ನೀಡುತ್ತಿದ್ದಾರೆ. ಕಾಡಿನಲ್ಲಿ ಹೆಚ್ಚು ಹುಲ್ಲು ಬೆಳೆಸಲು ಇಲಾಖೆ ಜೊತೆ ಕೈ ಜೋಡಿಸಿದ್ದಾರೆ. ಅಕ್ಟೋಬರ್‌ನಲ್ಲಿ ಅರಣ್ಯ ಇಲಾಖೆ ಅಭಯಾರಣ್ಯದಲ್ಲಿ ಸಫಾರಿಯನ್ನು ಆರಂಭಿಸಿತು. ಈಗ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ.

ಅಭಯಾರಣ್ಯದ ಸಫಾರಿಯಲ್ಲಿ ಅರಣ್ಯ ಇಲಾಖೆ ಜೀಪುಗಳು ಸುಲಭವಾಗಿ ಸಾಗಲು ಅನುಕೂಲವಾಗುವಂತೆ, ಕೃಷ್ಣಮೃಗಗಳನ್ನು ನೋಡಲು ಸಹಾಯಕವಾಗುವಂತೆ ವಿಶಾಲವಾದ ಹಲ್ಲುಗಾವಲು ಬೆಳೆಸಲಾಗುತ್ತಿದೆ. ಇದಕ್ಕಾಗಿ ನೀಲಗಿರಿ ಮರಗಳನ್ನು ಕಡಿಯಲಾಗುತ್ತಿದೆ.

ಮೊದಲು ಖಾಸಗಿ ವಾಹನದಲ್ಲಿ ಪರವಾನಗಿ ಪಡೆದುಕೊಂಡು ಕೃಷ್ಣಮೃಗ ಅಭಯಾರಣ್ಯ ವೀಕ್ಷಣೆಯ ಸಫಾರಿ ಆರಂಭಿಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಕಾರಣ ಈಗ ಅರಣ್ಯ ಇಲಾಖೆಯ ವಾಹನದಲ್ಲೇ ಸಫಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀಲಗಿರಿ ಮರಗಳನ್ನು ತೆರವುಗೊಳಿಸಿ ಹಲ್ಲುಗಾವಲು ಹೆಚ್ಚಿಸಲು ಪ್ರಾರಂಭಿಸಿದ ಬಳಿಕ ಸಫಾರಿ ವೇಳೆಯಲ್ಲಿ ಹಲವು ಪ್ರಾಣಿಗಳ ಜೊತೆ ಚಿರತೆಗಳು ಸಹ ಕಾಣಿಸುತ್ತಿದ್ದು, ಪ್ರವಾಸಿಗರು ಸಂತಸಗೊಳ್ಳುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ ಇನ್ನೂ ಹೆಚ್ಚಿನ ಜನರನ್ನು ಸೆಳೆಯಲು ಇನ್ನಷ್ಟು ಯೋಜನೆಯನ್ನು ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಕೈಗೊಳ್ಳಲಾಗಿದೆ.

ಹುಲ್ಲುಗಾವಲು ಹೆಚ್ಚಾಗುತ್ತಿರುವುದರಿಂದ ಕೃಷ್ಣಮೃಗಗಳು ಅಕ್ಕಪಕ್ಕದ ಹೊಲಗಳಿಗೆ ನುಗ್ಗುವ ಪ್ರಕರಣಗಳು ಕಡಿಮೆಯಾಗುತ್ತಿವೆ. ಸಫಾರಿಗೆ ಆದ್ಯತೆ ನೀಡಿ, ಕೃಷ್ಣಮೃಗ ಬೆಳೆಗಳನ್ನು ನಾಶಮಾಡದಂತೆ ಇಲಾಖೆ ಕೈಗೊಳ್ಳುವ ಕಾರ್ಯಕ್ಕೆ ಸ್ಥಳೀಯ ರೈತರು ಸಹ ಬೆಂಬಲ ನೀಡುತ್ತಿದ್ದಾರೆ.

1960-70ರ ದಶಕದಲ್ಲಿ ಈ ಪ್ರದೇಶದಲ್ಲಿ ಹಲವು ಪ್ರಭೇಧದ ಪಕ್ಷಿಗಳಿದ್ದವು. ಆದರೆ ವಾಸಸ್ಥಾನದ ನಾಶ, ಆಹಾರದ ಕೊರತೆಯ ಕಾರಣ ಅವುಗಳು ನಾಶವಾಗಿವೆ, ವಲಸೆ ಹೋಗಿವೆ. ಈಗ ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಹ ಅರಣ್ಯ ಇಲಾಖೆ ವಿವಿಧ ಮರಗಳನ್ನು ಬೆಳೆಸುತ್ತಿದೆ.

ಈ ಅಭಯಾರಣ್ಯದಲ್ಲಿ 2017ರಲ್ಲಿ 7,400 ಕೃಷ್ಣಮೃಗಗಳಿದ್ದವು. ಅರಣ್ಯ ಇಲಾಖೆಯ ಮಾಹಿತಿಯಂತೆ ಸದ್ಯ 10,000ಕ್ಕೂ ಅಧಿಕ ಕೃಷ್ಣಮೃಗಗಳಿವೆ. ಕೃಷ್ಣಮೃಗಗಳ ಸಂಖ್ಯೆ ಹೆಚ್ಚಿಸಲು, ಅವುಗಳ ಆಹಾರವನ್ನು ಹೆಚ್ಚಿಸಲು ದೂರದೃಷ್ಟಿಯ ಕ್ರಮಗಳು ಅಗತ್ಯವಿದೆ. ವಾಸಸ್ಥಾನ, ಆಹಾರ ಸುಲಭವಾಗಿ ಸಿಕ್ಕರೆ ಅವುಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣಮೃಗ ಅಭಯಾರಣ್ಯದಲ್ಲಿ ಸಫಾರಿ ಮಾಡಲು ಇಲಾಖೆ ವತಿಯಿಂದ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ವಾಹನ ಖರೀದಿ ಮಾಡಲಾಗಿದೆ. ಪ್ರತಿನಿತ್ಯ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 4 ರಿಂದ 6.30ರ ತನಕ ವಾಹನದಲ್ಲಿ ಅಭಯಾರಣ್ಯದ ಒಳಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತದೆ.

ಅಭಯಾರಣ್ಯದಲ್ಲಿ ಜಿಂಕೆ, ಮೊಲ, ಕೃಷ್ಣಮೃಗ, ನವಿಲು, ಮುಳ್ಳುಹಂದಿ, ಕಾಡುಹಂದಿ, ಮುಂಗುಸಿ ಮತ್ತು ಆಗಾಗ ಚಿರತೆಗಳನ್ನು ಕಣ್ತುಂಬಿಕೊಳ್ಳಬಹುದು. 1974ರಲ್ಲಿ ಇದನ್ನು ಅಭಯಾರಣ್ಯ ಎಂದು ಸರ್ಕಾರ ಘೋಷಣೆ ಮಾಡಿತ್ತು. ಈಗ ಸುಮಾರು 4 ಕಿ. ಮೀ. ದೂರ ಇಲ್ಲಿ ಸಫಾರಿ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+