ಸೋಲಿನ ಭಯದಲ್ಲಿ ಸಿದ್ದರಾಮಯ್ಯ ಗಲ್ಲಿ-ಗಲ್ಲಿ ಓಡಾಡುತ್ತಿದ್ದಾರೆ: ತಂದೆ ಪರ ಭರತ ಬೊಮ್ಮಾಯಿ ಭರ್ಜರಿ ಪ್ರಚಾರ
ಹಾವೇರಿ, ಏಪ್ರಿಲ್ 07: ಕಾಂಗ್ರೆಸ್ ಪಕ್ಷ ಹುಟ್ಟಿದ್ದೇ ಸುಳ್ಳಿನಿಂದ ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಹೇಳಿದ್ದರು. ಇವರು ಕಾಂಗ್ರೆಸ್ ನ್ನು ವಿಸರ್ಜಿಸದೆ ಸುಳ್ಳು ಹೇಳಿಕೊಂಡೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ನದಿ ಹರಳಹಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮೊದಲು ಸುದ್ದಿಗಾರ ಜೊತೆಗೆ ಅವರು ಮಾತನಾಡಿದರು. ಬಿಜೆಪಿಯ ಕೇಂದ್ರ ನಾಯಕರು ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳುತ್ತಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಈ ವೇಳೆ ಬೊಮ್ಮಾಯಿ ತಿರುಗೇಟು ನೀಡಿದರು.

ಕಾಂಗ್ರೆಸ್ ನಿರಂತರವಾಗಿ ಸುಳ್ಳು ಹೇಳುತ್ತಲೇ ಬಂದಿದೆ. ಇಂದಿರಾ ಗಾಂಧಿಯವರು ಗರೀಬಿ ಹಠಾವೊ ಅಂತ ಹೇಳಿದ್ದರು. ದೇಶದಲ್ಲಿ ಈಗಲೂ ಬಡತನ ಇದೆ. ಅವರು ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇಂದೊಂದೆ ಸಾಕ್ಷಿ ಸಾಕು ಎಂದು ಹೇಳಿದರು.
ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮುಕ್ತಾಯ ಆಗಿದೆ. ಲೋಕಸಭಾ ಚುನಾವಣ ಕಣ ಸಿದ್ದವಾಗಿದೆ. ಬಿಜೆಪಿಗೆ ವಿಶ್ವಾಸ ಇದ್ದು, ಮೊದಲ ಹಂತದಲ್ಲಿ ನಮಗೆ ಅಭೂತಪೂರ್ವ ಬೆಂಬಲ ಸಿಗಲಿದೆ. ಸಿದ್ದರಾಮಯ್ಯ ಓಡಾಡುವುದು ನೋಡಿದರೆ ಅವರಿಗೆ ಭಯ ಹುಟ್ಟಿಕೊಂಡಿದೆ. ಸೋಲಿನ ಭಯದಿಂದ ಗಲ್ಲಿಗಲ್ಲಿಯಲ್ಲಿ ಓಡಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ತಂದೆಯ ಪರ ಪುತ್ರ ಭರತ ಬೊಮ್ಮಾಯಿ ಪ್ರಚಾರ
ಹಾವೇರಿ ಗದಗ ಲೋಕಸಭಾ ಕ್ಷೇತ್ರದ ತುಂಬೆಲ್ಲ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರ ಪರ ಅವರ ಪುತ್ರ ಭರತ ಬೊಮ್ಮಾಯಿ ಅವರು ಭಾನುವಾರ ಭರ್ಜರಿ ಪ್ರಚಾರ ನಡೆಸಿದರು.

ಹಾವೇರಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿ ತಂದೆಯ ಪರವಾಗಿ ಮತ ಯಾಚನೆ ಮಾಡಿದರು. ತಂದೆ ಪ್ರತಿನಿಧಿಸುವ ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಮ್ಮ ತಂದೆ ಪರವಾದ ಜನರ ಒಲವಿದೆ. ನಮ್ಮ ತಂದೆ ಈ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಕ್‌ಸ್ಟಾರ್ ಹೋರಿ ದರ್ಶನ ಪಡೆದ ಸಿಎಂ ಪುತ್ರ
ಇದಕ್ಕೂ ಮೊದಲು ಹಾವೇರಿ ಜಿಲ್ಲೆಯ ನಾಗೇಂದ್ರಮಟ್ಟಿಯ ರಾಕ್ ಸ್ಟಾರ್ ಖ್ಯಾತಿಯ ಹೋರಿ ಇಂದು ನಿಧನ ಹೊಂದಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿಯವರು ನಾಗೇಂದ್ರಮಟ್ಟಿಗೆ ತೆರಳಿ ರಾಕ್ ಸ್ಟಾರ್ ಹೋರಿಯ ಅಂತಿಮ ದರ್ಶನ ಪಡೆದರು.












Click it and Unblock the Notifications