Independence Day: ಕೆಂಪುಕೋಟೆ ಧ್ವಜಾರೋಹಣಕ್ಕೆ ಹಾವೇರಿಯ ಕೂರಗುಂದ ವಿದ್ಯಾರ್ಥಿನಿ ಆಯ್ಕೆ
ಹುಬ್ಬಳ್ಳಿ, ಆಗಸ್ಟ್ 12: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡುತ್ತಿದೆ. ಈಗಾಗಲೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳಿಂದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಈ ಪೈಕಿ ಹಾವೇರಿ ತಾಲೂಕಿನ ವಿದ್ಯಾರ್ಥಿನಿಯೊಬ್ಬರು ಆಯ್ಕೆಯಾಗಿದ್ದಾರೆ.
ಬೆಂಗಳೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಿಂದ ಒಬ್ಬೊಬ್ಬ ವಿದ್ಯಾರ್ಥಿಯನ್ನು ಕೆಂಪುಕೋಟೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ. ಬೆಳಗಾವಿ ವಿಭಾಗದಿಂದ ಹಾವೇರಿ ತಾಲೂಕು ಕೂರಗುಂದ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯ 10ನೇ ತರಗತಿ ವಿದ್ಯಾರ್ಥಿನಿ ಹಿರಿಯಮ್ಮ ನರಸಪ್ಪ ಅಗಸರ ಆಯ್ಕೆಯಾಗಿದ್ದಾರೆ.

ಹಾವೇರಿ ಡಿಡಿಪಿಐ ಕಚೇರಿಯಿಂದ ಆಯ್ಕೆ ಮಾಡಲು ಸೂಚನೆ ಬಂದಿತ್ತು. ಡಿಡಿಪಿಐ ಸುರೇಶ್ ಹುಗ್ಗಿ ಸೂಚನೆ ಮೇರೆಗೆ ಕೂರಗುಂದ ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯೆ ಶಿವಲೀಲಾ ಎಸ್. ವಾಣಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಹಿರಿಯಮ್ಮರನ್ನು ಆಯ್ಕೆ ಮಾಡಿದ್ದಾರೆ. ಆಗಸ್ಟ್ 13ರಂದು ಹಿರಿಯಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಮಾನಯಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಹಾವೇರಿಯಿಂದ ಡಿವೈಪಿಸಿ ಲತಾಮಣಿ ಟಿ.ಎಂ. ಅವರು ಕೂಡ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೆಂಪುಕೋಟೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ ಹಿರಿಯಮ್ಮಗೆ ತಮ್ಮ ಶಾಲೆಯಿಂದ ಆತ್ಮೀಯ ಬೀಳ್ಕೊಡಲಾಯಿತು. ಶಾಲೆಯಲ್ಲಿ ಮುಖ್ಯೋಪಾಧ್ಯಾಯೆ ಶಿವಲೀಲಾ ಎಸ್. ವಾಣಿ, ಬಾಲಕಿ ಹಿರಿಯಮ್ಮಳನ್ನು ಸನ್ಮಾನಿಸಿ, ಬೀಳ್ಕೊಟ್ಟರು. ನಂತರ ಮಾತನಾಡಿದ ಎಚ್.ಎಂ ಶಿವಲೀಲಾ, ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಹಿಂದುಳಿದ ಗ್ರಾಮದ ವಿದ್ಯಾರ್ಥಿನಿ ಆಯ್ಕೆಯಾಗಿದ್ದು ಶಾಲೆ, ಗ್ರಾಮ ಸೇರಿದಂತೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು ಹಿರಿಯಮ್ಮ ದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.












Click it and Unblock the Notifications