ಮದುವೆ ತಂದ ಆಪತ್ತು: ರಾಣೇಬೆನ್ನೂರಿನ ಒಂದೇ ಕುಟುಂಬದ 32 ಜನರಿಗೆ ಕೊರೊನಾ ಸೋಂಕು
ರಾಣೇಬೆನ್ನೂರು, ಜುಲೈ 17: ಮದುವೆ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ವರನ ತಂದೆ ಹಾಗೂ ವಧುವಿನ ತಾಯಿ ಇಬ್ಬರೂ ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಶುಕ್ರವಾರ ಒಂದೇ ದಿನ ಆ ಕುಟುಂಬದ 32 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Recommended Video
ಜೂನ್ 29 ರಂದು ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗನ ಮದುವೆ ಮಾಡಿದ್ದರು. ಅದೇ ದಿನ ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು.
ಜು.7 ರಂದು ಚಿಕಿತ್ಸೆ ಫಲಕಾರಿಯಾಗದೆ ವರನ ತಂದೆ ದಾವಣಗೆರೆಯಲ್ಲಿ ಮೃತಪಟ್ಟಿದ್ದರು. ಇದಾದ ನಾಲ್ಕು ದಿನದಲ್ಲಿ ಅಂದರೆ ಜು.11 ರಂದು ವಧುವಿನ ತಾಯಿ ಕೂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

ವರನ ತಂದೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಂದೇ ಕುಟುಂಬದ 38 ಜನರನ್ನು ಅಂತರವಳ್ಳಿ ರಸ್ತೆಯ ಸರ್ಕಾರಿ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಪೈಕಿ 32 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 6 ಜನರ ವರದಿ ಬರುವುದು ಬಾಕಿಯಿದೆ.

ಕೊರೊನಾ ಸೋಂಕು ಆರಂಭದಿಂದಲೂ ದಿನಕ್ಕೆ 1 ಅಥವಾ 2 ಪ್ರಕರಣ ಕಾಣಿಸಿಕೊಳ್ಳುತ್ತಿದ್ದ ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಮದುವೆ ಸಮಾರಂಭವೊಂದರ ಪರಿಣಾಮ ಇಂದು 32 ಜನರಿಗೆ ಸೋಂಕು ದೃಢಪಟ್ಟಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಇಂದು ಹಾವೇರಿ ಜಿಲ್ಲೆಯಲ್ಲಿ 58 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 389 ಕ್ಕೆ ಏರಿಕೆಯಾಗಿದೆ.












Click it and Unblock the Notifications