Yettinahole Project: ಸೆಪ್ಟೆಂಬರ್ 6ರಂದು ಎತ್ತಿನಹೊಳೆ ಯೋಜನೆ ಉದ್ಘಾಟನೆ: ಯಾರೆಲ್ಲಾ ಭಾಗಿ?
ಹಾಸನ ಸೆಪ್ಟೆಂಬರ್ 3: ಸೆಪ್ಟೆಂಬರ್ 6 ರಂದು ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ಎತ್ತಿನಹೊಳೆ ಯೋಜನೆ ಉದ್ಘಾಟನೆಯಾಗಲಿದ್ದು ಇಂದು ಹಾಸನದಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಎತ್ತಿನಹೊಳೆ ತುಮಕೂರು ಕೋಲಾರದವರೆಗೆ ನೀರು ಹರಿಸೋ ಯೋಜನೆಯಾಗಿದ್ದು, 2014ರಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಹೇಮಾವತಿ ಬಿಟ್ಟರೆ ಜಿಲ್ಲೆಯ ಪ್ರಮುಖ ಯೋಜನೆ ಎತ್ತಿನಹೊಳೆ ಯೋಜನೆಯಾಗಿದೆ.
ಸೆಪ್ಟೆಂಬರ್ 6 ರಂದು ಎತ್ತಿನಹೊಳೆ ಯೋಜನೆ ಉದ್ಘಾಟನೆಯಾಗಲಿದ್ದು ಇಂದು ಹಾಸನದಲ್ಲಿ ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಆಗ ಈ ಎತ್ತಿನಹೊಳೆ ಯೋಜನೆ ಜಾರಿ ಆಗಲ್ಲ ಎಂದು ಈ ಜಿಲ್ಲೆಯ ವಿರೋದಿ ಬಣ ಹೇಳುತ್ತಾ ಬಂದಿತ್ತು. ಆದರೆ ಈಗ ಆ ಆಯೋಜನೆ ಫಲಪ್ರದ ಆಗಿದೆ. ಸೆಪ್ಟೆಂಬರ್ 6 ರಂದು ಸಿಎಂ, ಡಿಸಿಎಂ, ಫಲಾಭವಿ ಭಾಗದ ಶಾಸಕರು ಭಾಗಿಯಾಗಿ ಎತ್ತಿನಹೊಳೆ ಯೋಜನೆ ಉದ್ಘಾಟನೆ ಮಾಡಲಿದ್ದಾರೆ.

ಒಂದೇ ಪಂಪ್ ನಿಂದ ಹರಿಯುತ್ತಿರೊ ನೀರಿನಿಂದ ಈಗಾಗಲೆ ಹಲವು ಕೆರೆ ತುಂಬಿದೆ. ಇನ್ನೂ ನಾಲ್ಕು ವಿಯರ್ ಗಳಿಂದ ನೀರು ಹರಿಯೊ ಯೋಜನೆಗೆ ಚಾಲನೆ ಸಿಗಲಿದೆ. ಡಿಕೆ ಶಿವಕುಮಾರ್ ಅವರು ಬಂದ ಮೇಲೆ ಅಡೆತಡೆ ದೂರವಾಗಿ ಯೋಜನೆ ಸಕ್ಸಸ್ ಆಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದರು.
ಸಮುದ್ರಕ್ಕೆ ಹೋಗ್ತಿದ್ದ ನೀರನ್ನು ತಿರುಗಿಸಿ ಹರಿಸಲಾಗಿತ್ತಿದೆ. ಈ ಮಹತ್ತರ ಯೋಜನೆ ಜನರಿಗೆ ಅರ್ಪಣೆ ಮಾಡಲು ಸಿಎಂ ಬರ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಭಗೀರತ ಕೆಲಸ. ಈ ಯೋಜನೆಗಾಗಿ ಸಕಲೇಶಪುರದ ಜನ ತ್ಯಾಗ ಮಾಡಿದ್ದಾರೆ. ಜಿಲ್ಲೆಯ ಬೇಲೂರು ಅರಸೀಕೆರೆ ಭಾಗಕ್ಕೆ ಅನುಕೂಲ ಆಗಲಿದೆ. ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಐದು ಕಿಲೋ ಮೀಟರ್ ಕೆಲಸ ಆದರೆ ಅರಸೀಕೆರೆಗೆ ನೀರು ಹರಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದರು.

2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣ
2027ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1ನೇ ಹಂತದ ಯೋಜನೆಯಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸಾಧ್ಯವಾಗಲಿದ್ದು, 2ನೇ ಹಂತದ ಯೋಜನೆಯಡಿ ಉಳಿದ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ ತುಮಕೂರಿಗೆ ನೀರು ಹರಿಸಲಾಗುವುದು. ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು.
ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು ಎಂದು ಹೇಳಿದರು.

ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು. ಹಿಂದಿನ ಸರ್ಕಾರವು ಸಾಕಷ್ಟು ಪ್ರಯತ್ನ ಪಟ್ಟಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ ಎಂದು ತಿಳಿಸಿದರು.
ಸೆಪ್ಟೆಂಬರ್.6ರಂದು 12.05 ನಿಮಿಷಕ್ಕೆ ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಾರೆ. ಒಂದಷ್ಟು ಪ್ರಮುಖ ಭಾಗಗಳಲ್ಲಿ 10.30 ಒಳಗೆ ಸಚಿವರುಗಳು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು ಎಂದರು.












Click it and Unblock the Notifications