ಮಾಜಿ ಪ್ರಧಾನಿ ದೇವೇಗೌಡ್ರ ವಿರುದ್ದ ಹಾಸನ ಶಾಸಕ ಪ್ರೀತಂ ಗೌಡ ವಾಗ್ದಾಳಿ
ಹಾಸನ, ಡಿ 3: 2004ರಿಂದ ಹಾಸನ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿರುವ ಜೆಡಿಎಸ್ ವರಿಷ್ಠ ದೇವೇಗೌಡ್ರು, ದೇವರ ದಯೆಯಿಂದ ಪ್ರಧಾನಿಯೂ ಆದವರು. ಆದರೆ, ಸತತ ಮೂರು ವರ್ಷಗಳಿಂದ ಇಲ್ಲಿನ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ವಾಗ್ದಾಳಿ ನಡೆಸಿದ್ದಾರೆ.
ಮಳೆ ಬಂದರೂ ನಾವೇ ಬರ್ಸಿದ್ದು ಅಂತಾರೆ, ರೋಡಿಗೆ ಟಾರ್ ಹಾಕಿಸಿದ್ದೂ ನಾವೇ ಅಂತಾರೆ, ಕ್ಷೇತ್ರದಲ್ಲಿ ಏನೇ ಅಭಿವೃದ್ದಿ ಕೆಲಸ ನಡೆಯಲಿ ಅದು ನಮ್ಮಿಂದಲೇ ಎಂದು ಗೌಡ್ರು ಹೇಳುತ್ತಾರೆ. ಆದರೆ, ಕಾಡಾನೆ ಹಾವಳಿಯನ್ನು ತಡೆಯಲು, ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಗೌಡ್ರು ಸೋತಿದ್ದಾರೆಂದು ಪ್ರೀತಂ ಗೌಡ ಹೇಳಿದ್ದಾರೆ.
ಸಕಲೇಶಪುರದ ಬಾಳ್ಳುಪೇಟೆಯಲ್ಲಿ ರೈತರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಕಾಡಾನೆಯ ಹಾವಳಿಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಸಂಸದರಾಗಿ ದೇವೇಗೌಡ್ರು ರೈತರ ಸಮಸ್ಯೆಗೆ ಸ್ಪಂದಿಸಬೇಕಾಗಿತ್ತು ಎಂದು ಪ್ರೀತಂ ಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರೈತರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಪ್ರೀತಂ ಗೌಡ, ಇಷ್ಟು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಚ್ಚಾಶಕ್ತಿಯ ಕೊರತೆ ಇಲ್ಲಿ ಕಾಡುತ್ತಿದೆಯೇ ಹೊರತು, ಬೇರೇನೂ ಅಲ್ಲ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಚಾರದಲ್ಲಿ ದೇವೇಗೌಡ್ರು, ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾದರು. ಅದೇ ರೀತಿ, ಕಾಡಾನೆ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಬಹುದಿತ್ತಲ್ಲವೇ ಎಂದು ಪ್ರೀತಂ ಗೌಡ ಪ್ರಶ್ನಿಸಿದ್ದಾರೆ.
ಸರಕಾರವೂ ಅವರದ್ದೇ.. ಮುಖ್ಯಮಂತ್ರಿಗಳೂ ಅವರ ಪುತ್ರರೇ.. ಕಾಡಾನೆ ಹಾವಳಿ ಎಂದಾಕ್ಷಣ ಕೇಂದ್ರದ ಕಡೆಗೆ ಬೊಟ್ಟು ಮಾಡುವುದನ್ನು ಬಿಡಬೇಕು. ರಾಜಕೀಯ ಎಲ್ಲಿ ಮಾಡಬೇಕೋ, ಅಲ್ಲಿ ಮಾಡಬೇಕು ಎಂದು ಪ್ರೀತಂ ಗೌಡ, ಮಾಜಿ ಪ್ರಧಾನಿಯವರ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications