ಎಚ್‌ಡಿಕೆ ಏನೇ ಅಂದ್ರು ಆಶೀರ್ವಾದದಂತೆ, ಮುಂದಿನ ಬಾರಿಯು ಶಾಸಕನಾಗುತ್ತೇನೆ; ಪ್ರೀತಮ್ ಗೌಡ
ಹಾಸನ, ಸೆಪ್ಟೆಂಬರ್ 17: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನನ್ನ ಬಗ್ಗೆ ಏನೇ ಮಾತನಾಡಿದರೂ ನನಗೆ ಆಶೀರ್ವಾದವಿದ್ದಂತೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ನನ್ನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದರೆ ಸದನದಲ್ಲಿ ಸಿಕ್ಕಾಗ ಅಲ್ಲೆ ಮಾತನಾಡುತ್ತೇನೆ. ಮುಂದೆ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಗೆದ್ದು ಶಾಸಕನಾಗುವೆ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಹಾಸನದ ದಿವಂಗತ ಹೆಚ್.ಎಸ್. ಪ್ರಕಾಶ್ ಜನ್ಮದಿನದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾಸ್ವಾಮಿ ವಾಗ್ದಾಳಿ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಪ್ರೀತಮ್ ಗೌಡ " ಕುಮಾರಣ್ಣ ನನ್ನ ಹಿತೈಷಿ, ನಮ್ಮ ಸಮಾಜದ ಹಿರಿಯರು, ಅವರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಇದೆ. ನನ್ನ ಬಗ್ಗೆ ಅವರಿಗೆ ಕಾಳಜಿ ಇದೆ, ಹಾಗಾಗಿ ಅವರು ಏನು ಮಾತಾಡಿದರೂ ಅದು ನನಗೆ ಆಶೀರ್ವಾದ ಎಂದು ಭಾವಿಸಿದ್ದೇನೆ. ಆದರೆ ಅವರ ಬಗ್ಗೆ ಮಾತಾನಾಡುವಷ್ಟು ದೊಡ್ಡವನಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಅವರು, ನಾನು ಒಂದು ಬಾರಿ ಗೆದ್ದಿರೋ ಸಾಮಾನ್ಯ ಶಾಸಕ, ಹಾಗಾಗಿ ಕುಮಾರಣ್ಣನ ಮಾತುಗಳನ್ನು ನಾನು ಸ್ವೀಕರಿಸುತ್ತೇನೆ. ಏನು ಸಲಹೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದರು.
ಸೋಮವಾರ ಸದನದ ಸಭೆಯಲ್ಲಿ ಸಿಗುವುದರಿಂದ ಅಲ್ಲೇ ಮಾತಾಡುತ್ತೇನೆ. ಬೇರೆಯವರು ನನ್ನ ಬಗ್ಗೆ ಏನಾದರೂ ಕುಮಾರಣ್ಣರಿಗೆ ತಪ್ಪು ಮಾಹಿತಿ ಕೊಟ್ಟಿರಬಹುದೇನೋ, ಅದರ ಬಗ್ಗೆ ಅವರ ಹತ್ತಿರವೇ ಮಾತಾಡುತ್ತೇನೆ. ರಾಜಕೀಯವನ್ನು ಹೊರತುಪಡಿಸಿ ಕುಮಾರಸ್ವಾಮಿಯವರ ಜೊತೆಗೆ ನನ್ನ ಒಡನಾಟ ವೈಯಕ್ತಿಕವಾಗಿ ಬಹಳ ಉತ್ತಮವಾಗಿದೆ. ಇದು ಹಾಸನದಲ್ಲಿರುವವರಿಗೆ ಗೊತ್ತಿಲ್ಲ. ಜೆಡಿಎಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಸ್ವಾಭಾವಿಕವಾಗಿ ಸ್ಥಳೀಯರು ಹೇಳಿದ್ದನ್ನು ಉಲ್ಲೇಖ ಮಾಡಿರುತ್ತಾರೆ. ಕಾರ್ಯಕರ್ತರನ್ನು ಹುರಿದುಂಬಿಸುವುದಕ್ಕೆ ಹೇಳಿದ್ದಾರೆ. ಅದನ್ನು ತಪ್ಪು ಎಂದು ಭಾವಿಸುವುದಿಲ್ಲ ಎಂದರು.

ಅಭಿವೃದ್ಧಿ ಒಪ್ಪಿದರೆ ಜನ ಮತ ನೀಡುತ್ತಾರೆ
ಕಟ್ಟಡ ಕಟ್ಟುವುದು ಅಭಿವೃದ್ದಿ, ಲೇಔಟ್ ಮಾಡೋದು ಅಭಿವೃದ್ಧಿ, ಯುಜಿಡಿ ಮಾಡೋದು ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಅವರೊಂತರ ಅಭಿವೃದ್ಧಿ ಮಾಡಿದ್ದಾರೆ, ನಾನೊಂತರ ಅಭಿವೃದ್ಧಿ ಮಾಡಿದ್ದೇನೆ. ಅವರು ಅಭಿವೃದ್ಧಿ ಮಾಡಿರುವುದನ್ನು ಜನ ಒಪ್ಪಿದರೆ ಅವರಿಗೆ ವೋಟ್ ಹಾಕುತ್ತಾರೆ. ನಾನು ಅಭಿವೃದ್ಧಿ ಮಾಡಿರುವುದನ್ನ ಒಪ್ಪಿದರೆ ನನಗೆ ಮತದಾರರು ಮತ ಹಾಕುತ್ತಾರೆ. ಅದಕ್ಕಾಗಿ ಐದು ವರ್ಷಕ್ಕೆ ಒಂದು ಸಾರಿ ಎಕ್ಸಾಂ ಇಟ್ಟಿರುವುದು. ಐದು ವರ್ಷದ ಎಕ್ಸಾಂ ಬರೆಯೋಕೆ ಪ್ರಶ್ನೆ ಪತ್ರಿಕೆ ಇನ್ನೂ ಬಂದಿಲ್ಲ. ಪ್ರಶ್ನೆ ಪತ್ರಿಕೆ ಅಂದರೆ ನಾಮಿನೇಶನ್. ಎಕ್ಸಾಂ ಬರೆಯೋದು ಅಂದರೆ ಮತದಾನ. ರಿಸಲ್ಟ್ ದಿನ ಯಾರು ಪಾಸು, ಯಾರು ಡಿಸ್ಟಿಂಕ್ಷನ್, ಯಾರು ರ‍್ಯಾಂಕ್ ಎಂಬುದು ಗೊತ್ತಾಗುತ್ತದೆ ಅವಸರವೇಕೆ? ಅಲ್ಲಿಯವರೆಗೂ ಕಾಯೋಣ ಎಂದರು.
ಕುಮಾರಣ್ಣ ಇನ್ನೂ ಮೂರ್ನಾಲ್ಕು ಸಾರಿ ಬರುತ್ತೇನೆ ಎಂದು ಹೇಳಿದ್ದಾರೆ. ಎರಡು ಮೂರು ಸಾರಿ ಹಾಸನಕ್ಕೆ ಭೇಟಿ ಕೊಟ್ಟಾಗ ವಾಸ್ತವ ಅರ್ಥವಾಗುತ್ತದೆ. ಈಗ ಕೊಟ್ಟಿರುವ ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ಮುಂದಿನ ಸಲ ಬರುವಷ್ಟರೊಳಗೆ ಅವುಗಳನ್ನು ಕಾರ್ಯರೂಪಕ್ಕೆ ತರುತ್ತೇನೆ. ಕುಮಾರಣ್ಣ ಮುಂದಿನ ಸಲ ಏನು ಸಲಹೆ ಕೊಡುತ್ತಾರೋ ಅದನ್ನು ಸ್ವೀಕಾರ ಮಾಡುತ್ತೇನೆ ಎಂದರು.
ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಸಲಹೆ ಸ್ವೀಕಾರ:
ಚುನಾವಣೆ ಎಂದ ಮೇಲೆ ಪ್ರೀತಂಗೌಡನನ್ನು ಇನಾನಿಮಸ್ ಆಗಿ ಆಯ್ಕೆ ಮಾಡುವುದಿಲ್ಲ. ಕಾಂಗ್ರೆಸ್ ನಿಂದಲೂ ಒಬ್ಬ ಅಭ್ಯರ್ಥಿ ಇರುತ್ತಾರೆ, ಜೆಡಿಎಸ್‌ನಿಂದಲೂ ಒಬ್ಬರು ಇರುತ್ತಾರೆ. ಅವರ ತಯಾರಿ ಅವರು ಮಾಡಿಕೊಳ್ಳಬೇಕು. ನಮ್ಮ ತಯಾರಿ ನಾವೂ ಮಾಡಿಕೊಳ್ಳಬೇಕು ಅಷ್ಟೆ. ಕಾಂಗ್ರೆಸ್ ನವರೂ ಸಮಾವೇಶ ಮಾಡುತ್ತಾರೆ, ನಾವೂ ಸಮಾವೇಶ ಮಾಡುತ್ತೇವೆ. ಎಲ್ಲರೂ ಮಾಡುವುದು ಜನಸೇವೆ ಮಾಡುವುದಕ್ಕೆ. ಅವಕಾಶ ಕೊಟ್ಟ ಸಂದರ್ಭದಲ್ಲಿ ಕಳೆದ 25 ವರ್ಷದಲ್ಲಿ ಏನ್ ಮಾಡಿದ್ದಾರೆ ಎಂಬುದನ್ನು ಜನ ನೋಡಿದ್ದಾರೆ. ಈಗ ಐದು ವರ್ಷದಲ್ಲಿ ಪ್ರೀತಂಗೌಡ ಏನು ಸೇವೆ ಮಾಡಿದ್ದಾನೆ ಎಂಬುವುದನ್ನು ನೋಡಿದ್ದಾರೆ. ಜನರನ್ನು ಸೇರಿಸಿ ನಮ್ಮ ಮನವಿಯನ್ನು ಮಾಡಬಹುದು. ಸಮಾವೇಶಕ್ಕೆ ಬಂದವರೆಲ್ಲಾ ಪ್ರೀತಂಗೌಡಂಗೆ ವೋಟ್ ಹಾಕುತ್ತಾರೆ ಅಂದುಕೊಂಡರೆ. ಪ್ರೀತಂಗೌಡಂಗೆ ರಾಜಕಾರಣ ಗೊತ್ತಿಲ್ಲ ಎಂದಾಗುತ್ತದೆ ಎಂದರು.
ಶಾಸಕ ಪ್ರೀತಂಗೌಡ ರೌಡಿಸಂ ಮಾಡಿಸುತ್ತಿದ್ದಾರೆ ಎಂದು ಸಭೆಯೊಂದರಲ್ಲಿ ಎಚ್.ಪಿ. ಸ್ವರೂಪ್ ಹೇಳಿಕೆ ನೀಡಿದ್ದಾರೆ. ಚುನಾವಣೆ ಬರುವಾಗ ಒಳ್ಳೆಯವರು, ಕೆಟ್ಟವರು, ರೌಡಿಸಂ ಅಂತೆಲ್ಲಾ ವಿರೋಧ ಪಕ್ಷದವರು ಇನ್ನೊಂದು ಪಕ್ಷದ ಮೇಲೆ ಮಾತಾನಾಡೋದಕ್ಕೆ ಇರುವ ಶಬ್ದಗಳಾಗಿವೆ. ರಾಜಕಾರಣದಲ್ಲಿ ನಿಜವಾಗಿ ನೋಡಬೇಕಾಗಿರೋದು ಜನಸೇವೆಯನ್ನು ಮಾತ್ರ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರಿ. ಆದರೆ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಜನಸಾಮಾನ್ಯರನ್ನ ಕೇಳಿ? ಹಾಗೆಯೇ ಪ್ರೀತಂಗೌಡನ ಕೊಡುಗೆ ಏನು ಎಂದು ಹಾಸನ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕೇಳಿ ಅಲ್ಲೇ ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.











Click it and Unblock the Notifications