Hassan: ಹಾಸನದಲ್ಲಿ ಮೀನು ತಿಂದು ಇಬ್ಬರು ಸಾವು: ಅಷ್ಟಕ್ಕೂ ಆಗಿದ್ದೇನು..?
ಹಾಸನ, ಮೇ 06: ಕೆರೆ ಮೀನು ತಿಂದು ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ. ಬಸವಹಳ್ಳಿ ಗ್ರಾಮದ ರವಿಕುಮಾರ್ (46), ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈವಿಗಳು.
ಮೃತರು ಮಾತ್ರವಲ್ಲದೇ ಈ ಮೀನುಗಳನ್ನು ತಿಮದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅರಕಲಗೂಡು ಹಾಗೂ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ಬೇಸಿಗೆಗೆ ಗ್ರಾಮದ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. ಆದರೆ ಕೆರೆಯಲ್ಲಿ ಕೆಸರು ತುಂಬಿಕೊಂಡಿದ್ದು, ಕೆಸರಿನಲ್ಲಿ ಮೀನುಗಳಿದ್ದವು.

ಕೆರೆಯಲ್ಲಿ ನೀರು ಖಾಲಿಯಾಗಿ ಮೀನುಗಳನ್ನು ಹಿಡಿಯಲು ಸುಲಭವಾದ ಕಾರಣ ಗ್ರಾಮಸ್ಥರು ಕೆಸರಿನಲ್ಲಿದ್ದ ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದರು. ಮೀನುಗಳನ್ನು ತಿಂದ ಅನೇಕರಿಗೆ ವಾಂತಿ, ಭೇದಿ ಆರಂಭವಾಗಿದೆ. ಸುಮಾರು 15ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಇಬ್ಬರು ಸಾವನ್ನಪ್ಪಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಸವನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ದಾಳಿಯಿಂದ ಇನ್ನೊಂದು ಜೀವ ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ಲೂರು ದರ್ಗದ ಬಳಿಯ ಕೆಸುವಿನಕಲ್ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನನ್ನು ಕಾಡಾನೆ ತುಳಿದು ಸಾಯಿಸಿದೆ. ಆನಂದ ಪೂಜಾರಿ(55) ಮೃತ ದುರ್ದೈವಿ.
ನೂರ್ ಅಹಮ್ಮದ್ ಎಂಬುವವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಆನಂದ ಪೂಜಾರಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಮುಂಜಾನೆ ತೋಟದ ಕೆಲಸಕ್ಕೆಂದು ತೆರಳುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಆನಂದ ಪೂಜಾರಿಯನ್ನು ತುಳಿದು ಸಾಯಿಸಿದೆ. ಘಟನಾ ಸ್ಥಳದಲ್ಲಿ ಬಳಿಕ ಯಾವುದೇ ಕಾಡಾನೆ ಕಂಡು ಬಂದಿಲ್ಲ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.












Click it and Unblock the Notifications