'ಲೇಖಕರಿಗೆ ಲೇಖನಿ ಅಡವಿಡುವ ಪರಿಸ್ಥಿತಿ ಎಂದಿಗೂ ಬರಬಾರದು'
ಹಾಸನ, ಅಕ್ಟೋಬರ್ 21: ಲೇಖನಿ ಧರ್ಮಾಂಧತೆಯ ಮೇರೆ ಮೀರಿದ ತಲ್ಲಣಗಳ ಹೊಳವಾಗಬೇಕು, ಲೇಖಕರಿಗೆ ಲೇಖನಿ ಅಡವಿಡುವ ಪರಿಸ್ಥಿತಿ ಬರಬಾರದು, ಬಂದರೆ ಸಮಾಜ ನಿಂತ ನೀರಾಗಿಬಿಡುತ್ತದೆ ಎಂದು ಹಿರಿಯ ಸಾಹಿತಿ ಬಾನು ಮುಸ್ತಾಕ್ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ತಾಲೂಕು ಘಟಕ ಹಾಸನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಸಂಯುಕ್ತಾಶ್ರಯದಲ್ಲಿ ನಗರದ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಾಸನ ದಸರಾ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಬಾನು ಮುಸ್ತಾಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ದಸರಾ ನಾಡಹಬ್ಬದ ವೈಶಿಷ್ಟ್ಯತೆ ಕಳೆದುಕೊಳ್ಳುತ್ತಿದೆ. ಇದು ಕೇವಲ ಸರಕಾರದ ಉತ್ಸವವಾಗದೇ ಜನರ ಹಬ್ಬವಾಗಬೇಕು. ಸಮಷ್ಟಿ ಸ್ವರೂಪ ಪಡೆಯಬೇಕು. ಸಹಜ, ಪ್ರಾಕೃತಿಕ ನಿಯಮಗಳನ್ನು ಮೀರುವುದೇ ನಿಜವಾದ ಜೀವನಶೈಲಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಿಜವಾದ ಸಾಹಿತ್ಯ ಕೈಂಕರ್ಯ ಮಾಡುತ್ತಿದೆ. ಹೊಸ ಆಲೋಚನೆಗಳೊಂದಿಗೆ ಉದಿಸಿದ ಈ ಸಂಸ್ಥೆ ಜಿಲ್ಲೆಯಲ್ಲದೇ ಈಗಾಗಲೇ ರಾಜ್ಯದಾದ್ಯಂತ ವ್ಯಾಪಿಸಿ ಕಾರ್ಯೋನ್ಮುಖವಾಗಿರುವುದು ಅಭಿನಂಧನೀಯವಾಗಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವ್ಯ ಎಂದರೆ ಹೀಗೇ ಇರಬೇಕೆಂದು ಪಂಪ ಪೂರ್ವಯುಗದಿಂದ ಇಲ್ಲಿವರೆಗೂ ನಿಖರ ವ್ಯಾಖ್ಯಾನ ಸಿಕ್ಕಿಲ್ಲ. ಆದರೆ ಕನ್ನಡ ಕಾವ್ಯ ಪರಂಪರೆ ಅಗಾಧವಾಗಿದೆ. ಕವಿಗಳಿಗೆ ಕಾವ್ಯೇತಿಹಾಸದ ಪರಿಕಲ್ಪನೆ, ಜ್ಞಾನ ಅತ್ಯಗತ್ಯ. ಹಿರಿಯರ ಕವಿತೆಗಳನ್ನು ಓದಿದಾಗ ಕಾವ್ಯದ ಜಾಡು ಅರಿವಾಗುತ್ತದೆ. ಸಿದ್ಧಯ್ಯ ಪುರಾಣಿಕರು ಒಂದುಕಡೆ 'ಫಲಹೊತ್ತ ರೆಂಬೆ ಬಾಗುತ್ತದೆ, ಗೊನೆಹೊತ್ತ ಬಾಳೆ ಬಾಗುತ್ತದೆ, ತೆನೆಹೊತ್ತ ದಂಟು ಬಾಗುತ್ತದೆ ಏನೇನೂ ಇಲ್ಲದುದು ಬೀಗುತ್ತದೆ ನೋಡಾ ಸ್ವತಂತ್ರಧೀರ ಸಿದ್ಧೇಶ್ವರಾ' ಅಂದರೆ ಜ್ಞಾನದ ಫಲ ಹೊತ್ತು ಬಾಗಬೇಕಾಗುತ್ತದೆ.
ಜ್ಞಾನದ ಫಲ ನಮ್ಮದಾಗಬೇಕಾದರೆ ನಿರಂತರ ಅಧ್ಯಯನ ಹಾಗೂ ಅಧ್ಯಾಪನಗಳು ಅತ್ಯಗತ್ಯ. ರೆಂಬೆ, ದಂಟು, ಬಾಳೆಯಂತೆ ಸಮೃದ್ಧವಾಗಿ ಬಾಗಬೇಕಾದರೆ ನಮ್ಮೊಳಗಿನ ಜ್ಞಾನದ ಫಲ ಮಾಗಬೇಕಾಗುತ್ತದೆ. ಅಂದಾಗ ಮಾತ್ರ ವ್ಯಕ್ತಿ ಸುಕಾಸುಮ್ಮನೇ ಬೀಗುವುದು ನಿಲ್ಲುತ್ತದೆ ಎಂದರು.

ಕವಿ ಚಿನ್ನೇನಹಳ್ಳಿ ಸ್ವಾಮಿ ಮಾತನಾಡಿ, ಧರ್ಮಾಂಧತೆ, ಕೋಮುದಳ್ಳುರಿಯ ಪ್ರಸಕ್ತ ಉಸಿರುಗಟ್ಟುವ ವಾತಾವರಣದಲ್ಲಿ ನಾವಿದ್ದೇವೆ. ನಿಜವಾದ ಬರಹಗಾರನನ್ನು ಯಾರೂ ಗುರುತಿಸುವುದಿಲ್ಲ. ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಸಮ್ಮೇಳನಗಳಂತಹ ಕವಿಗೋಷ್ಠಿಗಳಲ್ಲಿ ರಾಜಕೀಯ, ಧಾರ್ಮಿಕ ಹಿನ್ನೆಲೆಯಲ್ಲಿ ಇಂದು ಕವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದ್ದರಿಂದಲೇ ಕವಿಗೋಷ್ಠಿಗಳಿಂದು ತನ್ನ ಮೌಲ್ಯಗಳನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೊಳಗಾಗುತ್ತಿವೆ.
ನಾನು ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೆಸಮಾಡುತ್ತಿದ್ದೇನೆ. ಕವನ ಸಂಕಲನ, ಕಥೆ, ಕಾದಂಬರಿ, ಲೇಖನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿದ್ದೇನೆ. ಆದರೆ ಇದುವರೆಗೂ ಯಾವುದೇ ರಾಜಕಾರಣ ಮಾಡದಿರುವುದರಿಂದ ಇದುವರೆಗೂ ನನಗೆ ಅಂತಹ ಅವಕಾಶಗಳು ಬಂದಿಲ್ಲ. ಆದರೆ ಕವಿಗಳಾದ ನಮಗೆ ಯಾವುದೇ ಅವಕಾಶಗಳು ಸಿಗದೇ ಹೋದರೂ ಆರಕ್ಕೇರದೇ ಮೂರಕ್ಕಿಳಿಯದೇ ನಮ್ಮ ಬರವಣಿಗೆ ಸಮಾಜಮುಖಿಯಾಗಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ವೇದಿಕೆ ನಡೆದುಬಂದ ಹಾದಿಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲ್ಲೂಕು ಅಧ್ಯಕ್ಷೆ ಕೆ. ಸಿ. ಗೀತಾ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಗೈಡ್ ಆಯುಕ್ತೆ ಜಯಾರಮೇಶ್, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಕೆ. ಎಸ್. ಮಂಜುನಾಥ್ ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications