ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ: ರೇಡಿಯೋ ಕಾಲರ್ ಅಳವಡಿಸಿದ ಅರಣ್ಯ ಇಲಾಖೆ
ಹಾಸನ, ಮೇ 17: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ಹಿಡಿದು ರೆಡಿಯೋ ಕಾಲರ್ ಅಳವಡಿಸೋದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಮಂಗಳವಾರದಿಂದ ಆಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಐದು ಪಳಗಿಸಿದ ಕಾಡಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೈಸೂರು ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ಪುಂಡಾನೆಗಳಿಗೆ ಹುಡುಕಾಟ ನಡೆಸಿದ ಅಧಿಕಾರಿಗಳು, ಒಂದು ಕಾಡಾನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕಿನಾದ್ಯಂತ ಕಾಡಾನೆಗಳ ನಿರಂತರ ದಾಳಿಯಿಂದ ಜನರು ಹೈರಾಣಾಗಿ ಹೋಗಿದ್ದರು. ಕಾಡಾನೆಗಳನ್ನು ಹಿಡಿದು ಚಲನವಲನಗಳನ್ನು ವೀಕ್ಷಿಸುವುದಕ್ಕೆ ಅಂತಾ ಅರಣ್ಯ ಇಲಾಖೆಯವರು ಇಂದಿನಿಂದ ಎಲಿಮೆಂಟ್ ಆಪರೇಷನ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಮೈಸೂರು ದಸರಾದಲ್ಲಿ ಅಂಬಾರಿ ಹೊರ್ತಿರೋ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಹಾಗೂ ಮಹೇಂದ್ರ, ದುಬಾರೆ ಆನೆ ಶಿಬಿರದ ಅಜ್ಜಯ್ಯ, ಪ್ರಶಾಂತ್ ಹಾಗೂ ವಿಕ್ರಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಕಲೇಶಪುರ ತಾಲೂಕಿನ ಕೆರೋಡಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಹೆಚ್ಚು ಕಾಡಾನೆಗಳ ಗುಂಪನ್ನು ಚದುರಿಸಿ ಕಾರ್ಯಾಚರಣೆ ಆರಂಭಿಸಿದ ತಂಡ, ಗುಂಪಿನಲ್ಲಿದ್ದ ಒಂದು ಕಾಡಾನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಯಿತು.

ಗುಂಪಿನಲ್ಲಿದ್ದ ಕಾಡಾನೆಗಳನ್ನು ಚದುರಿಸಿ, ಅದರಲ್ಲಿದ್ದ ಒಂದು ಹೆಣ್ಣಾನೆಗೆ ಅರವಳಿಕೆ ಮದ್ದು ನೀಡಿ ಸೆರೆಹಿಡಿದಿದ್ದರು. ಸುಮಾರು ಎರಡುಮೂರು ಗಂಟೆ ಕಾರ್ಯಾಚರಣೆ ನಡೆಸಿ, ಒಂದು ಕಾಡಾನೆಗೆ ಖೆಡ್ಡಾ ತೋಡಿದರು. ಹಳೇ ರೆಡಿಯೋ ಕಾಲರ್ ತೆಗೆದು, ಹೊಸ ರೆಡಿಯೊ ಕಾಲರ್‌ಅನ್ನು ಅಳವಡಿಸಿದ ಬಳಿಕ ಕಾಡಾನೆಯನ್ನು ಅಲ್ಲಿಯೇ ಬಿಟ್ಟರು.
ಈ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅರಣ್ಯಾಧಿಕಾರಿ ಹರೀಶ್, ' ರೇಡಿಯೋ ಕಾಲರ್ ಅಳವಡಿಸಲು ಆದೇಶ ಇತ್ತು. ಹೀಗಾಗಿ ಒಂದು ಕಾಡಾನೆಯನ್ನು ಹಿಡಿದು ರೆಡಿಯೋ ಕಾಲರ್ ಅಳವಡಿಸಲಾಗಿದೆ. ಒಂದು ಕಾಡಾನೆಗೆ ಆಳವಡಿಸುವುದರಿಂದ ಇಡೀ ಗುಂಪನ್ನು ಮಾನಿಟರ್ ಮಾಡಲು ಅನುಕೂಲವಾಗಲಿದೆ. ಮೂರು ಕಾಡಾನೆಗಳಿಗೆ ಅಳವಡಿಸೋದಕ್ಕೆ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲಿಯೇ ಎರಡು ಪುಂಡಾನೆಗಳನ್ನು ಸೆರೆಹಿಡಿಯುತ್ತೇವೆ ಎಂದಿದ್ದಾರೆ.
ಜನರ ಜೀವ ಉಳಿಸುವ ಸಲುವಾಗಿ ನಾವು ರೇಡಿಯೋ ಕಾಲರ್ ಅಳವಡಿಸಿದ್ದೇವೆ. ಕಾಡಾನೆಗಳ ಗುಂಪಿನ ಬಗ್ಗೆ ಲೊಕೇಶನ್ ತಿಳಿದು ಬಂದರೆ ನಾವು ರೈತರಿಗೆ ಹಾಗೂ ಜನರಿಗೆ ಮಾಹಿತಿ ನೀಡುವುದಕ್ಕೆ ಅನುಕೂಲವಾಗುತ್ತದೆ ಎಂದು ಅರಣ್ಯ ಇಲಾಖೆಯವರು ರೇಡಿಯೋ ಕಾಲರ್ ಅಳವಡಿಸುತ್ತಿದ್ದಾರೆ. ಆದರೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಕಾಫಿ ತೋಟದಲ್ಲಿ ಹಿಂಡು ಹಿಂಡಾಗಿ ಸಂಚಾರ ಮಾಡುತ್ತಿದ್ದ ಕಾಡಾನೆಗಳನ್ನು ಹಿಡಿಯುವುದನ್ನು ಬಿಟ್ಟು, ಅರಣ್ಯ ಇಲಾಖೆಯವರು ಕೇವಲ ಒಂದು ಕಾಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ವಾಪಸ್ ಬಿಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications