32 ಗುಂಟೆ ಜಮೀನಿಗಾಗಿ ಮಾಸ್ಟರ್ ಪ್ಲಾನ್: ಬದುಕಿರುವ ವೃದ್ಧೆ ಹೆಸರಿನಲ್ಲಿ ಮರಣ ಪತ್ರ
ಹಾಸನ, ಮೇ 25: ಆಸ್ತಿ ಕಬಳಿಸಲು ಹತ್ತಿರದ ಸಂಬಂಧಿಕರೇ ಬದುಕಿರುವ ವೃದ್ಧೆ ಹೆಸರಿನಲ್ಲಿ ಮರಣ ಪತ್ರ ಪಡೆದಿರುವ ಘಟನೆ ಹಾಸನದಲ್ಲಿ ನಡೆದಿದಿದ್ದು, ಇತ್ತೀಚಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬ ಪತ್ನಿ ಪಾರ್ವತಮ್ಮ ಹೆಸರಿನಲ್ಲಿ ಬೇಲೂರು ತಹಶೀಲ್ದಾರ್ ಕಚೇರಿಯಿಂದ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಪಾರ್ವತಮ್ಮ ಅವರ ಬಳಿ ಇರುವ 32 ಗುಂಟೆ ಜಮೀನನ್ನು ಕಬಳಿಸುವ ಉದ್ದೇಶದಿಂದ ಪಾರ್ವತಮ್ಮ ಅವರ ಹತ್ತಿರದ ಸಂಬಂಧಿಕರೊಬ್ಬರ ಮಗ, ಬದುಕಿರುವಾಗಲೇ ಮರಣ ಪತ್ರ ಪಡೆಯುವ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪಾರ್ವತಮ್ಮ ತಮ್ಮ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿ ವಿಭಾಗ ಮಾಡಿದ್ದರು. ತಮ್ಮ ಜೀವನಾಂಶಕ್ಕೆ 32 ಗುಂಟೆ ಜಮೀನನ್ನು ಇಟ್ಟುಕೊಂಡಿದ್ದರು. ಅಲ್ಲದೇ ಪಾರ್ವತಮ್ಮ ಜೀವನ ನಡೆಸಲು ಬೇರೆ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದರು.
ಹೀಗಾಗಿ ಅವರ ಜಮೀನು ಕಬಳಿಸಲು ಹತ್ತಿರದ ಸಂಬಂಧಿಕರೊಬ್ಬರ ಮಗ 2020 ಏಪ್ರಿಲ್ 10 ರಂದು ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಏಪ್ರಿಲ್ 20 ನೋಂದಣಿ ಮಾಡಿಸಿದ್ದಾರೆ. ಅದರಂತೆ ಬೇಲೂರು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಅಕ್ಟೋಬರ್ 14 ರಂದು ಪಾರ್ವತಮ್ಮ ಹೆಸರಿನಲ್ಲಿ ಮರಣ ದೃಢೀಕರಣ ಪತ್ರವನ್ನ ನೀಡಿದ್ದಾರೆ
ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಮರಣ ಪ್ರಮಾಣ ಪತ್ರದ ಬಗ್ಗೆ ಪಾರ್ವತಮ್ಮ ಕುಟುಂಬದವರಿಗೆ ಗೊತ್ತಾಗಿದ್ದು, ಬೇಲೂರು ತಹಸಿಲ್ದಾರ್ ಕಚೇರಿಗೆ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪಾರ್ವತಮ್ಮ ಪುತ್ರ ಮಲ್ಲೇಶ್ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳ್ಳತನವಾಗಿದ್ದ 30 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ
ಚಿಕ್ಕಮಗಳೂರು: ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ 30 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಎಸ್ಪಿ ಕಚೇರಿ ಸಭಾಂಗಣದಲ್ಲಿ ಸಿಇಐಆರ್ ಪೋರ್ಟಲ್‍ನಲ್ಲಿ ದಾಖಲಾದ ಪ್ರಕರಣಗಳ ಸಂಬಂಧ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡವರಿಗೆ ವಾಪಾಸ್ ನೀಡಿ ಮಾತಾನಾಡಿದ ಅವರು, ದೂರ ಸಂಪರ್ಕ ಇಲಾಖೆ ವತಿಯಿಂದ ಸಿಇಐಆರ್(ಸೆಂಟ್ರಲ್ ಎಕ್ಯುಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ಇದು ನಾಗರೀಕ ಸ್ನೇಹಿ ವೆಬ್ ಪೋರ್ಟಲ್ ಆಗಿದೆ ಎಂದು ಹೇಳಿದರು.
ಮೊಬೈಲ್ ಕಳೆದುಕೊಂಡವರು ಪೋರ್ಟಲ್‍ನಲ್ಲಿ ರಿಜಿಸ್ಟರ್ ಮಾಡಿದರೆ ಆ ಬಗ್ಗೆ ಪೊಲೀಸರಿಗೆ ಮಾಹಿತಿ ಬರುತ್ತದೆ. ಈ ರೀತಿ ರಿಜಿಸ್ಟರ್ ಮಾಡುವುದರಿಂದ ಬೇರೆಯವರು ಆ ಮೊಬೈಲ್‌ನ್ನು ಬಳಸದ ರೀತಿ ನಂಬರ್ ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಆ ಮೊಬೈಲ್ ಅನ್ನು ಯಾರಾದರೂ ಬಳಸುತ್ತಿದ್ದರೆ ಪೊಲೀಸ್ ಇಲಾಖೆಗೆ ಅಲರ್ಟ್ ಮೆಸೇಜ್ ಬರುತ್ತದೆ. ಇದರ ಆಧಾರದಲ್ಲಿ ಈ ವರೆಗೆ 30 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದೇವೆ ಎಂದರು.

ಇನ್ನೂ 110 ಮೊಬೈಲ್‌ಗಳ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಕೆಲವು ಬೇರೆ ಬೇರೆ ರಾಜ್ಯಗಳಲ್ಲಿ ಆಕ್ಟೀವ್ ಆಗಿವೆ. ಅದನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ನೀಡಲಾಗುವುದು ಎಂದು ತಿಳಿಸಿದರು.
ಈವರೆಗೆ ನಮ್ಮ ಜಿಲ್ಲೆಯಲ್ಲಿ 377 ಮೊಬೈಲ್‌ಗಳನ್ನು ಜನರು ಕಳೆದುಕೊಂಡಿದ್ದಾರೆ. ಈ ಬಗ್ಗೆ ವೆಬ್ ಪೋರ್ಟಲ್ ಮತ್ತು ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ಈ ಪೈಕಿ ಈ ವರೆಗೆ ಒಟ್ಟು 144 ಮೊಬೈಲ್‌ಗಳು ಇರುವಿಕೆ ಬಗ್ಗೆ ವರದಿಗಳು ಸಿಕ್ಕಿವೆ. ಅವುಗಳನ್ನು ಬೇರೆ ಬೇರೆಯವರು ಉಪಯೋಗಿಸುತ್ತಿದ್ದಾರೆ. ಕೆಲವರು ಮತ್ತೆ ಸ್ವಿಚ್ ಆಫ್ ಮಾಡಿದ್ದಾರೆ. ಇನ್ನೂ ಕೆಲವು ಬೇರೆ ಬೇರೆ ರಾಜ್ಯಗಳಲ್ಲಿ ಉಪಯೋಗಿಸಲ್ಪಡುತ್ತಿವೆ. ಅವುಗಳನ್ನು ಶೀಘ್ರದಲ್ಲೇ ಕಂಡು ಹಿಡಿದು ತರಿಸಿಕೊಂಡು ವಾರಸುದಾರರಿಗೆ ನೀಡುವ ಕೆಲಸ ಆಗುತ್ತದೆ ಎಂದರು.
ಈಗ 30 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿರುವ ಸೆನ್ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಕಳೆದುಕೊಂಡಿದ್ದ ಮೊಬೈಲ್, ಪೊಲೀಸರ ಮೂಲಕ ಮತ್ತೆ ಕೈ ಸೇರಿದ ಬಗ್ಗೆ ಮಾಲೀಕರು ಸಂತಸ ವ್ಯಕ್ತಪಡಿಸಿದರು. ಸಾವಿರಾರು ರೂಪಾಯಿ ಬೆಲೆಯ ಮೊಬೈಲ್ ಮರಳಿ ಸಿಕ್ಕ ಸಂಭ್ರಮ ಒಂದೆಡೆಯಾದರೆ, ಕೆಲವು ಮೊಬೈಲ್‌ಗಳಲ್ಲಿ ಉಪಯುಕ್ತವಾದ ದಾಖಲೆಗಳು, ಮಾಹಿತಿಗಳು ಅಳಿಸದೆ ಹಾಗೇ ಉಳಿದಿದ್ದ ಬಗ್ಗೆಯೂ ಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಅನಿಸಿಕೆ ಹಂಚಿಕೊಂಡು ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಹಾಗೂ ಸೆನ್ ಘಟಕದ ಇನ್ಸ್‌ಪೆಕ್ಟರ್ ಗವಿರಾಜು ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.












Click it and Unblock the Notifications