ಹಲಾಲ್ ಮುಕ್ತ ದೀಪಾವಳಿ ಹೆಸರಲ್ಲಿ ಕಾನೂನು ಮೀರಿದರೆ ಕಠಿಣ ಕ್ರಮ: ಅಲೋಕ್ ಕುಮಾರ್
ಹಾಸನ, ಅಕ್ಟೋಬರ್ 20: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದೇವಾಲಯಕ್ಕೆ ಎಡಿಜಿಪಿ ಅಲೋಕ್‌ಕುಮಾರ್ ಭೇಟಿ ನೀಡಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ಅಕ್ಟೋಬರ್ 13ರಿಂದ ಆರಂಭವಾಗಿದ್ದು, ಆಕ್ಟೋಬರ್ 27 ರ ತನಕ ಹಾಸನಾಂಬೆ ಜಾತ್ರೆ ನಡೆಯಲಿದೆ. ಈಗಾಗಲೆ ರಾಜಕೀಯ ನಾಯಕರು, ಅಧಿಕಾರಿಗಳು ದೇವಿ ದರ್ಶನ ಪಡೆದಿದ್ದಾರೆ. ಗುರುವಾರ ಅಲೋಕ್‌ಕುಮಾರ್ ಹಾಸನಾಂಬೆ ದರ್ಶನ ಪಡೆದಿದ್ದು, ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಎಎಸ್‌ಪಿ ಮಿಥುನ್, ಡಿವೈಎಸ್‌ಪಿ ಉದಯ್ ಭಾಸ್ಕರ್ ಸಾಥ್ ನೀಡಿದರು.
ಹಿಂದುತ್ವ ಸಂಘಟನೆಗಳು ಹಲಾಲ್ ಮುಕ್ತ ದೀಪಾವಳಿ ಆಚರಣೆ ಅಭಿಯಾನ ಆರಂಭಿಸಿದ್ದು, ಅಭಿಯಾನದ ಹೆಸರಿನಲ್ಲಿ ಕಾನೂನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಇತಿಮಿತಿಯಲ್ಲಿ ಯಾರು ಪ್ರತಿಭಟನೆ ಮಾಡುತ್ತಾರೋ ಅದಕ್ಕೆ ನಮ್ಮ ಕಡೆಯಿಂದ ಸಮಸ್ಯೆಯಿಲ್ಲ ಆದರೆ ಕಾನೂನು ಮೀರಿ ನಡೆದುಕೊಂಡರೆ ಯಾರೇ ಆಗಲೀ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಎಚ್ಚರಿಸಿದರು.

ಸದ್ದಿಲ್ಲದೇ ಸಂಚು ರೂಪಿಸುತ್ತಿದ್ದರು
ಪಿಎಫ್ಐ ಬ್ಯಾನ್ ನಂತರ ಮಂಗಳೂರಿನಲ್ಲಿ ಐದು ಮಂದಿಯನ್ನು ಬಂಧಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಪಿಎಫ್ಐ ಸಂಘಟನೆ ನಿಷೇಧವಾಗಿದ್ದರೂ, ಸದ್ದಿಲ್ಲದೇ ಸಂಚು ರೂಪಿಸುತ್ತಿದ್ದ, ಪಿಎಫ್ಐಗೆ ಸೇರಿದ ಐವರನ್ನು ಮಂಗಳೂರಿನಲ್ಲಿ ಐದು ಜನರನ್ನು ದಸ್ತಗಿರಿ ಮಾಡಿದ್ದೇವೆ. ಈ ಐದು ಜನ ಒಂದೆಡೆ ಸೇರಿ ಸಂಚು ಮಾಡುತ್ತಿದ್ದರು. ವಿಶೇಷವಾಗಿ ಆರೋಪಿಗಳಿಗೆ ಯಾರ ಜೊತೆ ಸಂಪರ್ಕ ಇತ್ತು, ಎಲ್ಲೆಲ್ಲಿ ತರಬೇತಿ ನೀಡುತ್ತಿದ್ದರು, ಯಾವ ರೀತಿ ಸಂಚು ರೂಪಿಸಿದ್ದರು ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಎಲ್ಲಾ ಆಯಾಮಗಳಲ್ಲೂ ತನಿಖೆ
ಇದರ ಜೊತೆಗೆ ಟ್ರೈನಿಂಗ್ ಎಲ್ಲೆಲ್ಲಿ, ಯಾರ ಯಾರ ಜೊತೆ, ಯಾವ್ಯಾವ ರೀತಿ ನಡೆಯುತ್ತಿತ್ತು ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. ಇವರ ಜೊತೆ ಹೊರಗಡೆಯವರು ಯಾರು ಇವರ ಜೊತೆ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. ಈ ಪ್ರಕರಣದ ತನಿಖೆಯ ವಿಚಾರವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿ, ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾರೇ ಆಗಲಿ ಅಕ್ರಮ ಚಟುವಟಿಕೆ ಮಾಡುವವರ ಮೇಲೆ ಕಠಿಣವಾದ ಕ್ರಮ ಜರುಗಿಸಲಾಗುವುದು ಎಂದರು.

ಎಲ್ಲಾ ಜಿಲ್ಲೆಗಳಲ್ಲೂ ಮಾಹಿತಿ ಕಲೆ ಹಾಕಲಾಗುತ್ತಿದೆ
ಪಿಎಫ್ಐ ಸಂಘಟನೆ ಬ್ಯಾನ್ ಆಗಿದೆ ಎಂದು ಸುಮ್ಮನೆ ಕೂರಲ್ಲ, ಅವರ ಮೇಲೆ ನಾವು ಕಣ್ಣು ಇಟ್ಟಿದ್ದೇವೆ. ಕರಾವಳಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಆಗಲಿ ಎಲ್ಲಾ ಕಡೆ ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪುತ್ತೂರಿನಲ್ಲಿ ನಡೆಯುತ್ತಿದ್ದ ಟ್ರೈನಿಂಗ್ ಬಿಟ್ಟು ಬೇರೆ ಬೇರೆ ಕಡೆ ಎಲ್ಲೆಲ್ಲಿ ಟ್ರೈನಿಂಗ್ ನಡೆಯುತ್ತಿದೆ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು ಎಂದರು.

ದರ್ಶನಕ್ಕೆ ಬಂದಿದ್ದ ಭಕ್ತ ಸಾವು
ಹಾಸನ ತಾಲ್ಲೂಕಿನ, ಬೊಮ್ಮನಹಳ್ಳಿ ಗ್ರಾಮದ ಗಿರೀಶ್ (43) ಹಾಸನಾಂಬ ದರ್ಶನಕ್ಕೆ ಬಂದಿದ್ದ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನಾಂಬೆ ದೇವಾಲಯದ ಮುಖ್ಯದ್ವಾರ ಬಳಿಯೇ ಕೊನೆಯುಸಿರೆಳದಿದ್ದಾರೆ. ಹಾಸನದ ಪೆನ್ಶನ್ ಮೊಹಲ್ಲಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಿರೀಶ್ ಶವವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಇನ್ನು ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಇರುವುದರಿಂದ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ದರ್ಶನ ಅವಧಿ ವಿಸ್ತರಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಸ್ತುವಾರಿ ಸಚಿವರ ಸೂಚನೆ ಹಿನ್ನೆಲೆಯಲ್ಲಿ ದರ್ಶನ ಅವಧಿ ವಿಸ್ತರಣೆ ಮಾಡಲಾಗಿದೆ.ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಹಾಸನಾಂಬೆ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ವರ್ಷ ಕೊರೊನಾ ಆತಂಕ ಇಲ್ಲದ್ದರಿಂದ ಭಾರೀ ಸಂಖ್ಯೆಯಲ್ಲಿ ಭಕ್ತರ ದಂಡು ಹೆಚ್ಚಾಗುತ್ತಿದೆ.












Click it and Unblock the Notifications