ಹಾಸನ ಜಿಲ್ಲೆಯ ಹಂಗರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ತಡೆಗೋಡೆ ಕುಸಿತ
ಹಾಸನ, ಜುಲೈ, 28: ಹಾಸನ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಅವಾಂತರಗಳು ಕಡಿಮೆಯಾಗುತ್ತಿಲ್ಲ. ಸತತವಾಗಿ ಒಂದು ವಾರದಿಂದ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ತಡೆಗೋಡೆ ಕುಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ.
ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ರ ಮೇಲ್ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಪರಿಣಾಮ ಇದೀಗ ಸಂಪೂರ್ಣ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ. ಅಲ್ಲದೆ ಬೇಲೂರು - ಬಿಳಿಕೆರೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಉದ್ಘಾಟನೆಯಾಗಿ ಮೂರೇ ವರ್ಷಕ್ಕೆ ಮೂರನೇ ಬಾರಿ ಈ ಮೇಲ್ಸೇತುವೆ ಕುಸಿದುಬಿದ್ದಿದೆ. ಅದರಲ್ಲೂ ಮಳೆಗಾಲದಲ್ಲಿಯೇ ಮೇಲ್ಸೇತುವೆಯ ಸ್ಲ್ಯಾಬ್ ಕುಸಿಯುತ್ತಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆಗೆ ಶಾಲೆ ಗೋಡೆ ಕುಸಿತ
ಹಾಗೆಯೇ ಹಾಸನ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಗೆ ಶಾಲೆ ಗೋಡೆ ಕುಸಿದಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದಲ್ಲಿ ನಡೆದಿತ್ತು. ಉಲಿವಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದು ಬಿದ್ದಿದ್ದೆ, ತಡರಾತ್ರಿಯಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿತ್ತು.
ಉಲಿವಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಹೀಗಾಗಿ ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಹಣ ಸಂದಾಯ ಮಾಡದ ಹಿನ್ನಲೆಯಲ್ಲಿ ಗುತ್ತಿಗೆದಾರ ನೂತನ ಕಟ್ಟಡಕ್ಕೆ ಬೀಗ ಜಡಿದಿದ್ದರು. ಇದರಿಂದಾಗಿ ಹಳೆಯ ಕಟ್ಟಡದಲ್ಲೇ ಪಾಠ ಪ್ರವಚನ ನಡೆಯುತ್ತಿತ್ತು. ಆದರೆ ಭಾರೀ ಮಳೆಗೆ ಶಾಲೆ ಗೋಡೆ ಕುಸಿದಿತ್ತು.
ಅತ್ತ ನೂತನ ಕಟ್ಟಡ ಇತ್ತ ಹಳೆಯ ಕಟ್ಟಡವೂ ಇರದೇ ಇದೀಗ ಶಿಕ್ಷಕರು ಶಾಲೆಯ ಜಗ್ಗಲಿಯಲ್ಲಿಯೇ ಪಾಠ ಮಾಡುತ್ತಿದ್ದು, ಮಳೆಯ ನಡುವೆಯೇ ಹೊರಗೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳಿದ್ದರು. ಹೀಗಾಗಿ ಯಾವುದೇ ಅನಾಹುತ ಸಂಭವುಸುವ ಮುನ್ನ ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರ ಮಾಡುವಂತೆ ಪೋಷಕರು ಒತ್ತಾಯಿಸಿದ್ದರು. ಹೀಗಾಗಿ ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಛೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.












Click it and Unblock the Notifications