Hijab Row: ಕಸ್ತೂರಿ ಬಾ, ಮದರ್ ತೆರೆಸಾ ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಿರಲಿಲ್ಲವೇ ಎಂದ ಎಚ್‌ಡಿಕೆ
ಹಾಸನ, ಮಾರ್ಚ್ 18: ಕರ್ನಾಟಕದಲ್ಲಿ ಹಿಜಾಬ್ ಕುರಿತು ತಾವು ನೀಡಿರುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಅವರು ಮಾತನಾಡಿದರು. "ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನ್ನು ನಾವೆಲ್ಲರೂ ತಲೆಬಾಗಿ ಸ್ವೀಕರಿಸಬೇಕು ಎಂದು ನಾನು ಹೇಳಿದ್ದೆ, ಆದರೆ ಇದೇ ಹೇಳಿಕೆಯನ್ನು ಗೊಂದಲ ಮೂಡಿಸುವಂತೆ ತಿರುಚಲಾಗಿದೆ," ಎಂದರು.
ರಾಜ್ಯದಲ್ಲಿ ಹಿಜಾಬ್ ವಿಚಾರ ಇಟ್ಟುಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಎಚ್ ಡಿ ಕುಮಾರಸ್ವಾಮಿ, ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಪಿಯುಸಿವರೆಗೆ ಮಾತ್ರ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಈ ವಿಷಯದಲ್ಲಿ ಗೊಂದಲ ನಿವಾರಣೆಗೆ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಕ್ಕಳ ಮನಸ್ಸನ್ನು ಕಲುಷಿತಗೊಳಿಸದಿರಿ:
ಈ ಹಿಂದೆ ಮಹಿಳೆಯರ ವಿಚಾರದಲ್ಲಿ ಸಾಕಷ್ಟು ಮೌಢ್ಯತೆ ಇತ್ತು. ಶಿಕ್ಷಣ ಪಡೆದಿದ್ದರಿಂದಲೇ ಅಂತಹ ಮೌಢ್ಯಗಳು ನಿವಾರಣೆಯಾದವು. ಹಾಗಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಬಗ್ಗೆ ಆಲೋಚನೆ ಮಾಡಬೇಕಿದೆ. ಶಾಲಾ ಮಕ್ಕಳು ಹಾಲಿನಂಥ ಪರಿಶುದ್ಧ ಮನಸ್ಸಿನವರು, ಅದನ್ನು ಕಲುಷಿತ ಮಾಡಬೇಡಿ ಎಂದಷ್ಟೇ ಹೇಳಿದ್ದೆನು ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಆರೂವರೆ ಕೋಟಿ ಜನರ ರಕ್ಷಣೆ ಸರ್ಕಾರದ ಹೊಣೆ:
ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸರ್ಕಾರ ಆರೂವರೆ ಕೋಟಿ ಜನರಿಗಾಗಿ ಇದ್ದು, ಅವರೆಲ್ಲರನ್ನೂ ರಕ್ಷಿಸುವ ಹೊಣೆ ಸರ್ಕಾರದ ಮೇಲಿರುತ್ತದೆ. ಅದೇ ರೀತಿ ಸರ್ಕಾರವೇ ಕೊಟ್ಟ ಸಮವಸ್ತ್ರದ ದುಪ್ಪಟ್ಟವನ್ನು ಹೆಣ್ಣು ಮಕ್ಕಳು ತಲೆ ಮೇಲೆ ಹಾಕಿಕೊಳ್ಳಲಿ ಬಿಡಿ. ಅದನ್ನು ಅವರು ನೆರಳಿಗಾಗಿಯೋ ಅಥವಾ ಧೂಳಿನಿಂದ ರಕ್ಷಣೆ ಪಡೆಯಲು ಹಾಕೊಳ್ಳುತ್ತಾರೋ ಏನೋ ಗೊತ್ತಿಲ್ಲ. ಸರ್ಕಾರ ಅದರಲ್ಲಿ ಕೊಂಚ ರಿಯಾಯಿತಿ ಕೊಟ್ಟರೆ ಒಳ್ಳೆಯದು ಎಂದರು.
ತಲೆ ಮೇಲೆ ಸೆರಗು ಹಾಕಿಕೊಳ್ಳುವುದು ಮೊದಲಿನ ಸಂಸ್ಕೃತಿ:
ಮಹಾತ್ಮ ಗಾಂಧೀಜಿ ಅವರ ಧರ್ಮಪತ್ನಿ ಕಸ್ತೂರಿ ಬಾ ಅವರು, ರೋಗಿಗಳ ಪಾಲಿನ ದೇವತೆಯಾಗಿದ್ದ ಮದರ್ ತೆರೆಸಾ ಅವರೂ ತಲೆಯ ಮೇಲೆ ಸೆರಗು ಹಾಕುತ್ತಿರಲಿಲ್ಲವೇ? ಅದು ಮೊದಲಿಂದಲೂ ಬೆಳೆದುಕೊಂಡು ಬಂದಿದೆ. ಅದನ್ನೇ ಯಾಕೆ ಈಗ ದೊಡ್ಡದು ಮಾಡುತ್ತಿದ್ದೀರಾ? ಸರಕಾರವೇ ಈ ಬಗ್ಗೆ ರಾಜಿ ಮಾಡಲು ಮುಂದಾಗಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
"ಇದರ ಹಿಂದೆ ಕಾಣದ ಕೈಗಳಿವೆ ಎಂದು ಹೈಕೋರ್ಟ್ ಹೇಳಿದೆ. ಆ ಕಾಣದ ಕೈಗಳು ಯಾವವು? ಸರ್ಕಾರ ಮೊದಲು ಅವುಗಳನ್ನು ಪತ್ತೆ ಹಚ್ಚಿ ಜನರ ಮುಂದೆ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
"ಮಹಾಭಾರತ ಕಾಲದಿಂದಲೂ ಹತ್ಯಾಕಾಂಡಗಳು ನಡೆದುಕೊಂಡು ಬಂದಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆದ ಸಂದರ್ಭದಲ್ಲಿ 20 ಲಕ್ಷ ಕುಟುಂಬಗಳ ಬಲಿದಾನ ಆಗಿದೆ. ದೇಶದ ಹಿಂದಿನ ಚರಿತ್ರೆ ನೋಡಿದಾಗ ಮತ್ತೆ ಇಂತಹ ರಕ್ತಪಾತವೇ ಮುಂದುವರಿದುಕೊಂಡು ಬರಬೇಕಾ?," ಎಂದು ಪ್ರಶ್ನೆ ಮಾಡಿದರು.
ಕಾಶ್ಮೀರಿ ಫೈಲ್ಸ್ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ:
ʼಕಾಶ್ಮೀರ್ ಫೈಲ್ಸ್ʼ ಸಿನಿಮಾ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, "ಕಾಶ್ಮೀರಿ ಪಂಡಿತರ ನೋವುಗಳ ಬಗ್ಗೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಆದರೆ, ಅದು ಎಷ್ಟರಮಟ್ಟಿಗೆ ನಡೆದಿದೆ ಎಂದು ನಾನು ಹೋಗಿ ನೋಡಿಲ್ಲ. ಭಾವನಾತ್ಮಕವಾಗಿ ಸಕ್ಸಸ್ ಆಗುವುದಕ್ಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಸಿನಿಮಾ ಮಾಡುತ್ತಾರೆ. ಗೋದ್ರಾದಲ್ಲಿ ಗರ್ಭಿಣಿ ಹೆಣ್ಣು ಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗುವನ್ನು ಹೊರತೆಗೆದ ಕೃತ್ಯ ಕೂಡ ನಡೆದು ಹೋಗಿದೆ. ಇಂತವನ್ನೆಲ್ಲ ಮತ್ತೆ ಮುಂದುವರಿಸಿಕೊಂಡು ಹೋಗಬೇಕಾ? ಇದು ಆಗಬಾರದು ಎನ್ನುವುದು ನನ್ನ ಅಭಿಪ್ರಾಯ," ಎಂದರು.
ಅಭಿವೃದ್ಧಿ ಮೇಲೆ ಯಾರೂ ಮತ ಕೇಳುತ್ತಿಲ್ಲ:
ನಾವೇನಾದರೂ ನಿಜ ಹೇಳಲು ಹೋದರೆ ಅದನ್ನು ತಿರುಚುತ್ತಾರೆ. ಏನು ಮಾಡೋದು? ಈಗ ಜನರ ಅಭಿವೃದ್ಧಿ ಕೆಲಸದ ಮೇಲೆ ಯಾರು ಮತ ಕೇಳುತ್ತಿಲ್ಲ. ಅವರವರದೇ ಅದ ಅಜೆಂಡಾ ಇಟ್ಟುಕೊಂಡಿದ್ದಾರೆ. ಭಾವನಾತ್ಮಕ ವಿಚಾರಗಳ ಮೇಲೆ ಮತ ಕೇಳಲು ಹೊರಟಿದ್ದಾರೆ. ಕೊನೆಗೆ ಇದರಿಂದ ಕಷ್ಟಕ್ಕೆ ಸಿಲುಕುವುದು ಅಮಾಯಕ ಜನರು.ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಂಥ ಯಾವ ವಂಶ ಕೂಡ ಉಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.












Click it and Unblock the Notifications