Karnataka Rain: ರಾಜ್ಯದಲ್ಲಿ ವಾಡಿಕೆಗಿಂತ ಶೇ 28ರಷ್ಟು ಹೆಚ್ಚು ಮಳೆ
ಹಾಸನ, ಜುಲೈ 27: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹಳ್ಳ-ಕೊಳ್ಳಗಳು ತುಂಬಿವೆ. ನದಿಗಳು ಉಕ್ಕಿ ಹರಿಯುತ್ತಿದ್ದು, ವಿವಿಧ ಜಲಾಶಯಗಳು ಭರ್ತಿಯಾಗಿವೆ. ಭಾರೀ ಮಳೆಗೆ ಬೆಳೆಗಳು ಜಲಾವೃತವಾಗಿದ್ದು, ರೈತರು ಸಹ ಮಳೆ ಕಡಿಮೆಯಾದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ 28ರಷ್ಟು ಹೆಚ್ಚು ಮಳೆಯಾಗಿದೆ. ಈ ಕುರಿತು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿದ್ದಾರೆ, "ರಾಜ್ಯದಲ್ಲಿ ವಾಡಿಕೆ ಪ್ರಕಾರ 419 ಮಿ. ಮೀ. ಮಳೆ ಆಗಬೇಕಿತ್ತು. ಈಗಾಗಲೇ 540 ಮಿ. ಮೀ. ಗಿಂತ ಹೆಚ್ಚು ಮಳೆಯಾಗಿದೆ" ಎಂದರು.

"ಕೆಲವು ಜಿಲ್ಲೆಗಳಲ್ಲಿ ಕಳೆದ 15 ದಿನಗಳಿಂದ ಕಡಿಮೆ ಮಳೆಯಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ ಜಲಾಶಯಗಳಿಂದ ನದಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ನದಿಯಲ್ಲಿ ಹೆಚ್ಚು ಪ್ರಮಾಣ ನೀರು ಹರಿಯುತ್ತಿರುವುದರಿಂದ ಅನೇಕ ಭಾಗಗಳಲ್ಲಿ ಹಲವು ಕಡೆ ನೀರು ನುಗ್ಗುತ್ತಿದೆ" ಎಂದು ಹೇಳಿದರು.
"ರಾಜ್ಯ ಸರ್ಕಾರದದಿಂದ ತಕ್ಷಣ ನೆರವು ನೀಡುವಂತೆ ಸೂಚನೆ ಕೊಟ್ಟಿದ್ದೇನೆ. ನೀರು ನುಗ್ಗಿರುವ ಕಡೆ ಆರೈಕೆ ಕೇಂದ್ರ ತೆರೆದಿದ್ದೇವೆ ಎಲ್ಲಾ ಜಿಲ್ಲೆಗಳು ಸೇರಿ ರಾಜ್ಯದಲ್ಲಿ 114 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 600 ಮನೆಗಳು ಬಿದ್ದಿವೆ. ಹಾಸನದಲ್ಲಿ 16 ಮನೆಗಳು ಬಿದ್ದಿವೆ. ಮಳೆಯಿಂದ ಸಾವುಗಳು ಸಂಭವಿಸಿವೆ. ಕಾಲ ಕಾಲಕ್ಕೆ ಪರಿಹಾರ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಒಟ್ಟು 777 ಕೋಟಿ ಹಣವನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೂ ನಿಡಿದ್ದೇವೆ. ಹಾಸನ ಜಿಲ್ಲಾಧಿಕಾರಿಗೆ 23 ಕೋಟಿ ಹಣ ನೀಡಿದ್ದೇವೆ. ನೀರು ಬಂದಾಗ ಜನರು ಎಚ್ಚರಿಕೆಯಿಂದ ಇರಬೇಕು. ಹಳೆಯ ಮನೆಗಳಿದ್ದರೆ ಖಾಲಿ ಮಾಡಿ, ಪೂರ್ಣ ಮನೆ ಹಾನಿಯಾದವರಿಗೆ ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ಕೊಡುತ್ತೇವೆ" ಎಂದರು.
"ದಾಖಲೆಗಳು ಇಲ್ಲದವರಿಗೂ ಪರಿಹಾರ ಕೊಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಭಾಗಶಃ ಮನೆ ಹಾನಿಯಾದವರಿಗೆ 50 ಸಾವಿರ ಕೊಡಲು ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. 1 ಲಕ್ಷದ 25 ಸಾವಿರ ಹಣದ ಜೊತೆ ಒಂದು ಹೊಸ ಮನೆಯನ್ನು ನೀಡುತ್ತೇವೆ, ಪರಿಹಾರದ ಜೊತೆಗೆ ಮನೆಯನ್ನು ನೀಡುತ್ತಿದ್ದೇವೆ" ಎಂದು ಸಚಿವರು ವಿವರಿಸಿದರು.
ಕೇಂದ್ರ ಬಜೆಟ್‌ನಲ್ಲಿ ಅನ್ಯಾಯವಾಗಿದೆ: ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಬಹಳ ದೊಡ್ಡ ಅನ್ಯಾಯ ಮಾಡಿದ್ದಾರೆ, ಭದ್ರಾ ಮೇಲ್ದಂಡೆ ಯೋಜನೆಗೆ 1 ರೂಪಾಯಿ ಕೊಟ್ಟಿಲ್ಲ. ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ" ಎಂದು ದೂರಿದರು.
"ಮಹಾದಾಯಿ ಯೋಜನೆಯಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಕೆ ಮಾಡಿಕೊಳ್ಳಲು ಪರಿಸರ ಇಲಾಖೆ ಅನುಮತಿ ನೆಪವೊಡ್ಡಿ, ಗೋವಾ ರಾಜ್ಯಕ್ಕೆ ಅನುಕೂಲ ಮಾಡಿಕೊಡಲು ನಮಗೆ ವಂಚನೆ ಮಾಡುತ್ತಿದ್ದಾರೆ" ಎಂದು ಸಚಿವರು ಆರೋಪಿಸಿದರು.
"ತಮಿಳುನಾಡಿನ ಪಾಲಿಗೆ ಎಷ್ಟು ನೀರು ನೀಡಬೇಕು? ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ. ನಮ್ಮ ರಾಜ್ಯಕ್ಕೆ ಸೇರಬೇಕಾಗಿದ್ದ ನೀರು ಅದು. ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ. 5 ಸಾವಿರ ಕೋಟಿ ಕೊಡುತ್ತೀವಿ ಎಂದು ಘೋಷಣೆ ಮಾಡಿ, 1 ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯವನ್ನು ಮುಚ್ಚಿಕೊಳ್ಳಲು ಕನ್ನಡಿಗರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ" ಎಂದರು.
"ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಕೆಲಸ ಮಾಡಲು ಅನುಮತಿ ಮಾಡಿಕೊಡಿ ಆಮೇಲೆ ಉಳಿದಿದ್ದು ಮಾತನಾಡಿ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವುದು ದೊಡ್ಡ ಚೊಂಬು ಕರ್ನಾಟಕಕ್ಕೆ ಮೋಸ, ವಂಚನೆ ಮಾಡಿ, ಮೋಸದ ಜೊತೆಗೆ ನಮ್ಮ ಜೀವನಗಳ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ" ಎಂದು ದೂರಿದರು.
"ಮೊದಲು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿ. ದೊಡ್ಡ ಯಜಮಾನರು, ಚಿಕ್ಕಯಜಮಾನರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಕೈಹಿಡಿದು ಮೇಕೆದಾಟು ಯೋಜನೆಗೆ ಸಹಿ ಹಾಕಿಸಿದ್ದರೆ ನಾವು ನಿಮಗೆ ಧನ್ಯವಾದ ಹೇಳಿ ಕೈಮುಗಿಯುತ್ತಿದ್ದೆವು. ನಾನು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಮೇಕೆದಾಟು, ಕಳಸಾಬಂಡೂರಿ ಯೋಜನೆಗೆ ಅನುಮತಿ ಕೊಡಿಸಿ" ಎಂದರು. ಈ ಮೂಲಕ ಸಚಿವ ಎಚ್. ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಕುರಿತು ಪ್ರತಿಕ್ರಿಯಿಸಿದರು.
"ಉತ್ತರ ಕರ್ನಾಟಕದಲ್ಲಿ ಒಬ್ಬರು ಮಂತ್ರಿ ಆಗಿದ್ದಾರೆ, ದಕ್ಷಿಣ ಕರ್ನಾಟಕದಲ್ಲಿ ಒಬ್ಬರು ಮಂತ್ರಿ ಆಗಿದ್ದಾರೆ. ಮೇಕೆದಾಟು, ಕಳಸಾ-ಬಂಡೂರಿ ಯೋಜನೆಗೆ ಏಕೆ ಅನುಮತಿ ಕೊಡಿಸಲು ಆಗುತ್ತಿಲ್ಲ?. ಕರ್ನಾಟಕದ ನೀರು ನಮಗೆ ಸಿಗುತ್ತಿಲ್ಲ, ಬೇರೆ ರಾಜ್ಯಗಳಿಗೆ ಹೋಗುತ್ತಿದೆ ಸಮುದ್ರ ಸೇರುತ್ತಿದೆ, ಯಾರ ಹೊಟ್ಟೆ ತುಂಬುತ್ತಿದೆ. ನಮ್ಮ ಕನ್ನಡಿಗರಿಗೆ ಹಸಿವು ನೀಡಿ ಸಮುದ್ರ ತುಂಬಿಸುತ್ತಿದ್ದೀರಾ?. ಕೈಮುಗಿದು ಕೇಳಿಕೊಳ್ಳುತ್ತೇನೆ ನಿಮಗೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಮೇಕೆದಾಟು, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಿಸಿ. ಆಮೇಲೆ ಮಾತನಾಡಿ" ಎಂದು ಸಚಿವರು ಹೇಳಿದರು.












Click it and Unblock the Notifications