Preetham Gowda: ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಕುರಿತ 5 ಸಾಧಕ-ಬಾಧಕ ಅಂಶಗಳು
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಎಂದೂ ಕಾಣದ ಜಿದ್ದಾಹಿದ್ದಿನ ಕಣವನ್ನು ಈ ಬಾರಿ ನೋಡಬಹುದಾಗಿದೆ. ಅಂತಹ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಹಾಸನ ವಿಧಾನಸಭಾ ಕ್ಷೇತ್ರವೂ ಒಂದಾಗಿದೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಸತತ ಎರಡನೇ ಅವಧಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಧುಮುಕಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಹಾಸನದಲ್ಲಿ ಬಿಜೆಪಿ ಖಾತೆ ತೆರೆದಿದ್ದ ಪ್ರೀತಂ ಗೌಡ ಮತ್ತೊಮ್ಮೆ ಗೆಲುವಿನ ನಗೆ ಬೀರಲು ಸಜ್ಜಾಗಿದ್ದಾರೆ.

ಹಲವು ದಶಕಗಳಿಂದ ಜನತಾ ದಳ (ಜಾತ್ಯತೀತ) ಭದ್ರಕೋಟೆಯಾಗಿರುವ ಹಾಸನ ಕ್ಷೇತ್ರದಿಂದ ಪ್ರೀತಂ ಗೌಡ ಅವರನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಇನ್ನು ಪ್ರೀತಂ ಗೌಡರಿಗೆ ಎದುರಾಳಿಯಾಗಿ ನಾಲ್ಕು ಬಾರಿ ಶಾಸಕರಾಗಿದ್ದ ಎಚ್‌ಎಸ್ ಪ್ರಕಾಶ್ ಅವರ ಪುತ್ರ ಎಚ್‌ಎಸ್ ಸ್ವರೂಪ್ ಅವರನ್ನು ಈ ಬಾರಿ ಜೆಡಿಎಸ್ ಪಕ್ಷ ಕಣಕ್ಕಿಳಿಸಿದೆ.
ಇದಕ್ಕೂ ಮೊದಲು ಪ್ರೀತಂ ಗೌಡ ಅವರು ಎಚ್.ಡಿ. ರೇವಣ್ಣ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಎಚ್.ಡಿ. ರೇವಣ್ಣ ಕುಟುಂಬ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಿಸಲು ಭಾರೀ ಪ್ರಯತ್ನ ನಡೆಸಿದರು. ಆದರೆ ಅಂತಿಮವಾಗಿ ಸ್ವರೂಪ್ ಪ್ರಕಾಶ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇನ್ನು ಹಾಸನ ಕ್ಷೇತ್ರದ ಹಾಲಿ ಶಾಸಕ ಪ್ರೀತಂ ಗೌಡ ಯುವಕನಾಗಿದ್ದು, ರಾಜಕೀಯ ಪ್ರಬುದ್ಧತೆಯ ಜೊತೆಗೆ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ. ಇಡೀ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ.
ಹಾಸನ ಬಿಜೆಪಿ ಅಭ್ಯರ್ಥಿಯ 5 ಸಾಧಕ ಅಂಶಗಳು
* ಪ್ರೀತಂ ಗೌಡ ಅವರು 2018ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯನ್ನು ಎದುರಿಸಿ ಚೊಚ್ಚಲ ಪ್ರಯತ್ನದಲ್ಲಿಯೇ ವಿಜಯಶಾಲಿಯಾದರು. ಜೆಡಿಎಸ್‌ನ ಎಚ್‌ಎಸ್ ಪ್ರಕಾಶ್ ಅವರನ್ನು 13 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

* ಬಿಜೆಪಿ ಶಾಸಕ ಪ್ರೀತಂ ಗೌಡ ಪ್ರಭಾವಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆ ಹೊಂದಿದ್ದಾರೆ.
* ಪ್ರೀತಂ ಗೌಡ ಉತ್ತಮ ಮಾತುಗಾರನಾಗಿದ್ದು, ಎದುರಾಳಿಗಳಿಗೆ ಮಾತಿನಿಂದಲೇ ನಿದ್ದೆಗೆಡಿಸುವ ಕಲೆ ಹೊಂದಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ ಮಾಡಿದ್ದಾರೆ ಎಂಬ ಮಾತಿದೆ.
* 2019ರ ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆಯ ಕೆಆರ್ ಪೇಟೆ) ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರೀತಂ ಗೌಡ ನಿರ್ಣಾಯಕ ಪಾತ್ರ ವಹಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರೊಂದಿಗೆ ಪ್ರೀತಂ ಗೌಡ ಕ್ಷೇತ್ರದಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದರು.
* ಪ್ರೀತಂ ಗೌಡ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಲೆವಿಸ್‌ನಲ್ಲಿ ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಆರು ವರ್ಷಗಳ ಕಾಲ ಕೆಲಸ ಮಾಡಿದರು.
* ಪ್ರೀತಂ ಗೌಡ ಅವರು ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.
ಹಾಸನ ಬಿಜೆಪಿ ಅಭ್ಯರ್ಥಿಯ 5 ಬಾಧಕ ಅಂಶಗಳು
* ಪ್ರೀತಂ ಗೌಡಗೆ ದುರಹಂಕಾರ ಎಂದು ಜೆಡಿಎಸ್ ಕಾರ್ಯಕರ್ತರ ಆರೋಪಿಸುತ್ತಾರೆ.
* ಪ್ರೀತಂ ಗೌಡ ಅವರದ್ದು ಕೆಲಸ ಕಮ್ಮಿ, ಪ್ರಚಾರ ಜಾಸ್ತಿ ಎಂದು ಎದುರಾಳಿ ಪಕ್ಷದವರ ಅಭಿಪ್ರಾಯ.
* ಹಾಸನ ಜಿಲ್ಲೆಯಲ್ಲಿ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ರೇವಣ್ಣ ಕುಟುಂಬ ಪ್ರಭಾವಿಯಾಗಿದ್ದು, ಅವರ ವಿರುದ್ಧ ರಾಜಕಾರಣ ಮಾಡುವುದು ಕಷ್ಟಸಾಧ್ಯವಾಗಿದೆ.
* ಹಾಸನದಲ್ಲಿ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಡಿಮೆ ಎಂಬ ಮಾತಿದೆ.
* ಈ ಬಾರಿ ಜೆಡಿಎಸ್ ಅಭ್ಯರ್ಥಿ ಪರ ಅನುಕಂಪದ ಅಲೆ ಇದ್ದು, ಪ್ರೀತಂ ಗೌಡ ಗೆಲುವು ಕಷ್ಟಸಾಧ್ಯ ಎನ್ನಲಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.












Click it and Unblock the Notifications