ಮಗನಿಗೆ ಕಂಟಕವಾದ ಪೆನ್‌ಡ್ರೈವ್ ನಾಶಕ್ಕೆ ಎಚ್‌ಡಿ ರೇವಣ್ಣ ಮನೆಯಲ್ಲಿ ಹೋಮ, ಹವನ!
ಹಾಸನ ಮೇ 1: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕು ಪಡೆದುಕೊಳ್ಳುತ್ತಿದ್ದಂತೆ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಬೆಳಿಗ್ಗೆಯಿಂದ ಅವರ ಮನೆಯಲ್ಲಿ ಹೋಮ, ಹವನ ನಡೆದಿದೆ.
ರೇವಣ್ಣ ಪುತ್ರನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪ್ರಕರಣದ ತನಿಖೆ ಎಸ್‌ಐಟಿಗೆ ವರ್ಗಾವಣೆಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೂಡ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ಎಚ್‌ಡಿ ರೇವಣ್ಣ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಪೆನ್‌ಡ್ರೈವ್ ವಿಚಾರ ಹೊರಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ. ಸದ್ಯ ತನಿಖೆಯ ಭಾಗವಾಗಿ ಎಸ್‌ಐಟಿ ಪ್ರಜ್ವಲ್ ರೇವಣ್ಣಾಗೆ ಬುಲಾವ್ ನೋಟೀಸ್ ನೀಡಿದೆ. ಹೀಗಾಗಿ ಮೇ ಮೂರರಂದು ಪ್ರಜ್ವಲ್ ವಾಪಾಸ್ಸಾಗಲಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಎಚ್‌ಡಿ ರೇವಣ್ಣ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ. ಹೀಗಾಗಿ ರೇವಣ್ಣ ಹೊಳೆನರಸೀಪುರದ ಮನೆಯಲ್ಲಿ ಹೋಮ, ಹವನ ನೆರವೇರಿಸಿದ್ದಾರೆ.
ಮನೆಯಲ್ಲಿ ಹೋಮ ಕುಂಡ ನಿರ್ಮಿಸಿ ಹೋಮ-ಹವನ ಮಾತ್ರವಲ್ಲದೆ, ಬೆಳಗ್ಗೆಯಿಂದಲೇ ವಿವಿಧ ಪೂಜೆಯನ್ನೂ ಮಾಡಿಸಿದ್ದಾರೆ. ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಎಚ್‌ಡಿ ರೇವಣ್ಣ ಹೊಳೆನರಸೀಪುರಕ್ಕೆ ಆಗಮಿಸಿದ್ದರು. ಇಂದು ಮುಂಜಾನೆ ಮಾವಿನ ಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವೇಶ್ವರ, ಲಕ್ಷ್ಮಿ ನರಸಿಂಹ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದರು.

ಸದಾ ಜನರಿಂದ ತುಂಬಿರುತ್ತಿದ್ದ ಹೊಳೆನರಸೀಪುರದ ಮನೆಯಲ್ಲಿ ಪೂಜೆ ಕಾರಣ ಮನೆಯಲ್ಲವೂ ಖಾಲಿ ಆಗಿತ್ತು. ಹೋಮ, ಹವನದ ಬಳಿಕ ರೇವಣ್ಣ ಹಾಗೂ ಭವಾನಿ ರೇವಣ್ಣ ಮನೆಯಿಂದ ಹೊರಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ತನಿಖಾ ತಂಡ ರೇವಣ್ಣ ನಿವಾಸದ ಗೋಡೆಗೆ ಬುಧವಾರ ಬೆಳಗ್ಗೆ ನೋಟೀಸ್ ಅಂಟಿಸಿದೆ. ಮೇ 4ರಂದು ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಏನಿದು ಪ್ರಜ್ವಲ್ ಪೆನ್‌ಡ್ರೈವ್ ವಿಚಾರ?
ಹಾಸನ ಲೋಕಸಭಾ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಕಿರುಕುಳದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವೂ ಸಿಎಂ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಕೋರಿ ಮನವಿ ಮಾಡಿತ್ತು. ಸದ್ಯ ಇದರ ತನಿಖೆಗಾಗಿ ಎಸ್‌ಐಟಿ ವಿಶೇಷ ತಂಡವನ್ನು ರಚಿಲಾಗಿದ್ದು, ತನಿಖೆ ಆರಂಭಗೊಂಡಿದೆ.












Click it and Unblock the Notifications