Hasanamba jatra 2023: ಹುಂಡಿ ಹೊರತುಪಡಿಸಿ ದರ್ಶನದ ಟಿಕೆಟ್ & ಲಾಡು ಮಾರಾಟದಿಂದ ಬಂದ ಆದಾಯ ಎಷ್ಟು ಕೋಟಿ ಗೊತ್ತಾ?-ಮಾಹಿತಿ
ಹಾಸನ, ನವೆಂಬರ್, 16: ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ ಆರಂಭವಾಗಿ 14ಕ್ಕೆ ಮುಗಿದಿದೆ. ಇನ್ನು ದರ್ಶನದ ಟಿಕೆಟ್ ಮತ್ತು ಲಾಡು ಮಾರಾಟದಿಂದ ಬೊರೋಬ್ಬರಿ 6.15 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ ಎಂದು ತಿಳಿದುಬಂದಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ಇಲ್ಲಿಯೂ ಕೋಟಿ ಕೋಟಿ ಹಣ ಸಂಗ್ರಹವಾಗಿರುವ ನಿರೀಕ್ಷೆಯಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಷ್ಟೇ ನವೆಂಬರ್ 14ಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಇದೀಗ ಇಂದು (ನವೆಂಬರ್ 16) ಹಾಸನಾಂಬೆ ದೇವಾಲಯ ಆವರಣದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದೆ. ಈ ಕಾರ್ಯದಲ್ಲಿ 150ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ.

ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಸನಾಂಬೆ, ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದದೆ.
ಮಲೆ ಮಾದಪ್ಪನಿಗೆ ಹರಿದುಬಂತು ₹2.8 ಕೋಟಿ
ಚಾಮರಾಜನಗರ, ನವೆಂಬರ್, 16: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 10ರಿಂದ 14 ರವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು, ಕೇವಲ ಈ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಈ ಸಂಬಂಧ ಮಾಹಿತಿ ನೀಡಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ 5 ದಿನಗಳ ಅವಧಿಯಲ್ಲಿ 2.8 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ ಹುಂಡಿ ಹಣ ಸೇರಿಲ್ಲ.
ಯಾವ ಸೇವೆಯಿಂದ ಎಷ್ಟು ಹಣ?
ಕಳೆದ 5 ದಿನಗಳ ಅವಧಿಯಲ್ಲಿ 1786 ಚಿನ್ನದ ರಥೋತ್ಸವ, 50 ಬೆಳ್ಳಿ ರಥೋತ್ಸವ, 1,114 ಬಸವ ವಾಹನ, 9135 ಹುಲಿ ವಾಹನ, 410 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಸಿದ್ದಾರೆ. ಇನ್ನು ಮಲೆ ಮಹದೇಶ್ವರ ಹುಲಿವಾಹನ ಉತ್ಸವಕ್ಕೆ ಅತಿ ಹೆಚ್ಚು ಭಕ್ತರು ಆಗಮಿಸಿದ್ದಾರೆ. ಈ ಉತ್ಸವಗಳಿಂದಲೇ 86 ಲಕ್ಷ ರೂಪಾಯಿ ಹಣ ಪ್ರಾಧಿಕಾರಕ್ಕೆ ಸಂದಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಲಾಡು ಮಾರಾಟದಿಂದ 54 ಲಕ್ಷ, ಮಿಶ್ರ ಪ್ರಸಾದದಿಂದ 8 ಲಕ್ಷ, ಪುದುವಟ್ಟು ಸೇವೆಯಿಂದ 2 ಲಕ್ಷ, ಸೇವೆಗಳಿಂದ 5 ಲಕ್ಷ, ಪ್ರಸಾದದ ಕ್ಯಾರಿ ಬ್ಯಾಗ್‌ನಿಂದಲೇ 72 ಸಾವಿರ ಹಣ ಬಂದಿದ್ದು, ಒಟ್ಟಾರೆ 5 ದಿನದ ಅವಧಿಯಲ್ಲಿ ಕ್ಷೇತ್ರಕ್ಕೆ 2,08,82,110 ರೂಪಾಯಿ ಆದಾಯ ಬಂದಿದೆ.
ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರೆಗಳಿಗೆ ಉಚಿತ ದರ್ಶನ, ವಸತಿ ಹಾಗೂ ದಾಸೋಹದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಸುಮಾರು 10,600ಕ್ಕೂ ಹೆಚ್ಚು ಕಾಲ್ನಡಿಗೆ ಭಕ್ತಾದಿಗಳು ಈ ಪಾಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರನ ದರ್ಶನ ಪಡೆಯುವ ಜೊತೆಗೆ ಕೋಟ್ಯಾಂತರ ರೂಪಾಯಿ ಆದಾಯವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ.












Click it and Unblock the Notifications