ಹಾಸನದಲ್ಲಿ ವರುಣನ ಆರ್ಭಟ: ಮಳೆಯಲ್ಲೇ ಹಾಸನಾಂಬೆ ದರ್ಶನ, ಮುರಿದು ಬಿದ್ದ ಜಾತ್ರೆಯ ಸ್ವಾಗತ ಕಮಾನು
ಹಾಸನ, ನವೆಂಬರ್ 08: ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ ನಡುವೆಯೂ ಭಕ್ತರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಹಾಸನಾಂಬೆ ದೇವಿ ದರ್ಶನದ 6ನೇ ದಿನವಾದ ಇಂದು ಭಕ್ತಸಾಗರ ಹರಿದುಬಂದಿದ್ದು, ಸುರಿಯುತ್ತಿರುವ ಮಳೆಯಲ್ಲಿಯೇ ಭಕ್ತರು ದೇವಿ ದರ್ಶನ ಮಾಡುತ್ತಿದ್ದಾರೆ.
ದೇವಾಲಯದ ಸುತ್ತಮುತ್ತಲಿನ ಭಾಗಗಳಲ್ಲಿ ಧಾರಕಾರ ಮಳೆಯಾಗುತ್ತಿದ್ದರೂ, ದೇವಾಲಯದ ಮುಂದೆ ಹಚ್ಚಿದ್ದ ಕರ್ಪೂರ ಆರದೇ ಉರಿಯುತ್ತಿದೆ. ಪವಾಡ ಸದೃಶವೆಂಬಂತೆ ಭಕ್ತರೊಬ್ಬರು ದೇವಾಲಯದ ಮುಂದೆ ಹಚ್ಚಿದ್ದ ಮಳೆಯಲ್ಲಿಯೂ ಕರ್ಪೂರ ಉರಿಯುತ್ತಿದೆ. ಮಳೆಯ ನೀರು ಹರಿಯುತ್ತಿದ್ದರೂ, ಮಳೆ ಹನಿಗಳು ಬೀಳುತ್ತಿದ್ದರೂ ಕರ್ಪೂರ ಆರದನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಹಾಸನದಲ್ಲಿ ಸುರಿದ ಭಾರೀ ಮಳೆಯಿಂದ ಅನಾಹುತವೊಂದು ಸಂಭವಿಸಿದೆ. ಹಾಸನಾಂಬ ಜಾತ್ರೆ ಹಿನ್ನಲೆಯಲ್ಲಿ ಹಾಕಿದ್ದ ಸ್ವಾಗತ ಕಮಾನು ಕಾರಿನ ಮೇಲೆ ಉರುಳಿ ಬಿದ್ದಿದೆ. ಹಾಸನ ನಗರದ ಚನ್ನಪಟ್ಟಣ ವೃತ್ತದಲ್ಲಿ ಸ್ವಾಗತ ಕಮಾನು ಉರುಳಿ ಬಿದ್ದಿದ್ದು, ಕಾರು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಕಾರಿನ ಮೇಲಿನ ಸ್ವಾಗತ ಕಾಮಾನು ತೆರವುಗೊಳಿಸಿದ್ದಾರೆ.
ಧಾರಾಕಾರ ಮಳೆಯಿಂದ ಗೋಡೆ ಕುಸಿದು ವ್ಯಕ್ತಿ ಸಾವು
ಚಿಕ್ಕಮಗಳೂರು : ಬಯಲುಸೀಮೆ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಗೋಡೆ ಕುಸಿದು ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಚ್ಚೇರಿ ಕೋಡಿಹಳ್ಳಿ ಗ್ರಾಮದ 80 ವರ್ಷದ ಲಚ್ಚಾನಾಯ್ಕ ಗೋಡೆ ಕುಸಿತದಿಂದ ಸಾವನಪ್ಪಿರುವ ವ್ಯಕ್ತಿ ಆಗಿದ್ದಾರೆ.
ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ ಲಚ್ಚಾನಾಯ್ಕ ಮನೆಯ ಗೋಡೆ ಕುಸಿತವಾಗಿದೆ. ಈ ವೇಳೆ ಲಚ್ಚಾನಾಯ್ಕ ಶೌಚಾಲಯಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಕುಸಿದ ಗೋಡೆ ಕುಸಿದ ಪರಿಣಾಮ ಸ್ಥಳದಲ್ಲೇ ಲಚ್ಚಾನಾಯ್ಕ ಸಾವನಪ್ಪಿದ್ದಾರೆ. ಇನ್ನು ಸ್ಥಳಕ್ಕೆ ಸ್ಥಳೀಯ ಅಧಿಕಾರಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications